ಪುತ್ತೂರು: ತನ್ನ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಿರುವುದನ್ನು ವಿಚಾರಿಸಿದ್ದಕ್ಕೆ ಕೆಲವರು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿ ಕೊಳ್ತಿಗೆ ಗ್ರಾಮದ ಮೊಗಪ್ಪೆ ಅಂಗನವಾಡಿ ಕೇಂದ್ರದ ಸಹಾಯಕಿ ಸರಿತಾ (23) ಅವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಧ್ಯಾಹ್ನ ಮಕ್ಕಳು ನಿದ್ರಿಸಿದ್ದ ವೇಳೆ ಅಂಗನವಾಡಿ ಕೇಂದ್ರಕ್ಕೆ ಬಾಗಿಲು ಹಾಕಿ ನಾನು ಒಳಗಿದ್ದೆ. ಆಗ ನಾನು ಅಂಗನವಾಡಿಯಲ್ಲಿಲ್ಲ ಎಂದು ಆರೋಪಿಸಿ ಸ್ಥಳೀಯರಾದ ಜೀವರಾಜ್ ಹಾಗೂ ಸೀತಾರಾಮ್ ಶೆಟ್ಟಿ ಅವರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ದೂರು ನೀಡಿದ್ದರು.
ನನ್ನ ವಿರುದ್ಧ ದೂರು ನೀಡಿರುವ ಕುರಿತು ನಾನು ದೂರುದಾರ ಜೀವರಾಜ್ ಅವರ ಪತ್ನಿ ಲಲಿತಾ ಅವರಲ್ಲಿ ವಿಚಾರಿಸಿದ್ದು, ಇದೇ ಕಾರಣಕ್ಕೆ ಲಲಿತಾ ಅಂಗನವಾಡಿಗೆ ಬಂದು ಹಲ್ಲೆ ನಡೆಸಿದ್ದಾರೆ. ಜತೆಗಿದ್ದ ಜೀವರಾಜ್ ಹಾಗೂ ಸೀತಾರಾಮ ಶೆಟ್ಟಿ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ನನಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸರಿತಾ ಆರೋಪಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ದಲಿತ ಸೇವಾ ಸಮಿತಿ ಆಗ್ರಹ
ಸರಿತಾ ಮೇಲಿನ ಹಲ್ಲೆ ಘಟನೆಯನ್ನು ದಲಿತಾ ಸೇವಾ ಸಮಿತಿ ಖಂಡಿಸುತ್ತಿದೆ. ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ದಲಿತ ಸೇವಾ ಸಮಿತಿ ಜಿಲ್ಲಾ ಉಪಾಧ್ಯಕ್ಷ ರಾಜು ಹೊಸ್ಮಠ ಆಗ್ರಹಿಸಿದ್ದಾರೆ.