Advertisement

ತಂದೆ ಧ್ವನಿಯಲ್ಲಿ ಬಾಗಿಲು ತೆಗೆಸಿ ಲೈಂಗಿಕ ದೌರ್ಜನ್ಯ: 5 ವರ್ಷ ಜೈಲು

03:32 PM Jun 14, 2023 | Team Udayavani |

ಬೆಂಗಳೂರು: ತಂದೆ ಧ್ವನಿಯಲ್ಲಿ ಬಾಗಿಲು ತೆರೆಯಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 1ನೇ ತ್ವರಿತ ವಿಶೇಷ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

Advertisement

ಸಂತ್ರಸ್ತೆ ತಂದೆಯ ಸ್ನೇಹಿತನಾಗಿರುವ ಗವಿಯಪ್ಪ(31) ಶಿಕ್ಷೆಗೊಳಗಾದ ವ್ಯಕ್ತಿ. ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. 2021ರ ಜನವರಿ 13ರಂದು ತಂದೆ ಹೊರಗಡೆ ಹೋಗಿದ್ದರು. ಆಗ ಶಾಲೆಯಿಂದ ಮನೆಗೆ ಬಂದಿದ್ದ ಬಾಲಕಿ, ಬಾಗಿಲು ಹಾಕಿಕೊಂಡು ಊಟ ಮಾಡುತ್ತಿದ್ದಳು. ಅದೇ ವೇಳೆ ಮನೆಗೆ ಬಂದ ಗವಿಯಪ್ಪ, ಸಂತ್ರಸ್ತೆ ತಂದೆ ಧ್ವನಿಯಲ್ಲಿ ಬಾಗಿಲು ತೆರೆಯುವಂತೆ ಹೇಳಿದ್ದ. ಆಕೆ ಬಾಗಿಲು ತೆರೆಯುತ್ತಿದ್ದಂತೆ ಬಾಲಕಿಯ ಬಾಯಿ ಮುಚ್ಚಿ, ಕೂಗಾಡದಂತೆ ಬೆದರಿಸಿದ್ದಾನೆ. ನಂತರ ಬಾಲಕಿಯ ಬಟ್ಟೆಗಳನ್ನು ಬಿಚ್ಚಿ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದ. ಕೆಲ ಹೊತ್ತಿನ ಬಳಿಕ ಮನೆಗೆ ಬಂದ ಪೋಷಕರಿಗೆ ಸಂತ್ರಸ್ತೆ ಘಟನೆ ವಿವರಿಸಿದ್ದಾಳೆ.

ಈ ಸಂಬಂಧ ಪೋಷಕರು ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇನ್‌ಸ್ಪೆಕ್ಟರ್‌ ಸುನೀಲ್‌ ಪವಾರ್‌ ಆರೋಪಿಯನ್ನು ಬಂಧಿಸಿ ಕೋರ್ಟ್‌ಗೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 1ನೇ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್‌. ರೂಪಾ ವಿಚಾರಣೆ ನಡೆಸಿ ಅಪರಾಧಿಗೆ ಐದು ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ಹಾಗೂ ಡಿಎಲ್‌ಎಸ್‌ ಎಯಿಂದ ಸಂತ್ರಸ್ತೆಗೆ 50 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಪಿ. ಕೃಷ್ಣವೇಣಿ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next