Advertisement

ಸಿಎಎ, ಎನ್‌ಆರ್‌ಸಿ ಕಾಯಿದೆ ವಿರೋಧಿಸಿ ಉಗ್ರ ನಂಟು!

01:57 AM Jul 27, 2022 | Team Udayavani |

ಬೆಂಗಳೂರು: ಬಂಧನಕ್ಕೆ ಒಳಗಾಗಿರುವ ಅಸ್ಸಾಂ ಮೂಲದ ಅಖ್ತರ್‌ ಹುಸೇನ್‌ ಲಷ್ಕರ್‌ ಮತ್ತು ಜುಬಾನ್‌ ಅಲಿಯಾಸ್‌ ಆದಿಲ್‌ ಅಲಿಯಾಸ್‌ ರೂಬಾ ಕೇಂದ್ರದ ಬಿಜೆಪಿ ಸರಕಾರವು ಸಿಎಎ ಮತ್ತು ಎನ್‌ಆರ್‌ಸಿ ಜಾರಿಗೆ ತಂದುದಕ್ಕೆ ಪ್ರತೀಕಾರ ತೀರಿಸಲು ಅಲ್‌ಕಾಯಿದಾ ಮತ್ತಿತರ ಉಗ್ರ ಸಂಘಟನೆಗಳ ಸಂಪರ್ಕ ಬೆಳೆಸಿಕೊಂಡಿದ್ದರು. ಇವರ ಪ್ರಾಥಮಿಕ ವಿಚಾರಣೆ ವೇಳೆ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಶಂಕಿತರು 3 ವರ್ಷಗಳ ಹಿಂದೆ ಕೇಂದ್ರ ಜಾರಿಗೆ ತಂದಿದ್ದ ಎನ್‌ಆರ್‌ಸಿ, ಸಿಎಎಗಳಿಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಅಸ್ಸಾಂನಲ್ಲಿ ನಡೆದ ಪ್ರತಿಭಟನೆಗಳಲ್ಲೂ ಪಾಲ್ಗೊಂಡಿದ್ದರು. ಇವರಿಬ್ಬರ ಪೂರ್ವಜರು ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ವಲಸೆ ಬಂದಿದ್ದು, ಅನಂತರ ಅಸ್ಸಾಂನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅಸ್ಸಾಂನಲ್ಲಿ ಚುನಾವಣ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಅಸ್ಸಾಂನಲ್ಲೇ ಉಗ್ರವಾದ
ಅಸ್ಸಾಂನಲ್ಲಿ ಇದ್ದಾಗಲೇ ಈ ಇಬ್ಬರು ಉಗ್ರವಾದದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಅಖ್ತರ್‌ ಟೆಲಿಗ್ರಾಂನಲ್ಲಿ “ದಿ ಈಗಲ್‌ ಆಫ್ ಖೊರಾಸನ್‌ ಆ್ಯಂಡ್‌ ಹಿಂಡರ್‌- ಈಗಲ್‌’ ಎಂಬ ಗ್ರೂಪ್‌ ರಚಿಸಿದ್ದ. ಹಿಂದೂಗಳ ವಿರುದ್ಧ ಮುಸ್ಲಿಮರನ್ನು ಪ್ರಚೋದಿಸುತ್ತಿದ್ದ.

ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನದಲ್ಲಿರುವ ಅಲ್‌ಕಾಯಿದಾ ಸದಸ್ಯರು ಈತನ ಪ್ರಚೋದನಕಾರಿ ಪೋಸ್ಟ್‌ಗಳನ್ನು ಗಮನಿಸಿ, ಭಾರತದಲ್ಲಿ ಇರುವ ತಮ್ಮ ಸ್ಲೀಪರ್ ಸೆಲ್‌ಗಳ ಮೂಲಕ ಈತನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಈತನೂ ಅಲ್‌ಕಾಯಿದಾ ಸದಸ್ಯರನ್ನು ಸಂಪರ್ಕಿಸಿದ್ದ. ಸ್ನೇಹಿತ ಜುಬಾನ್‌ನನ್ನೂ ಉಗ್ರವಾದದ ಕಡೆ ಸೆಳೆದಿದ್ದ.

ಬೆಂಗಳೂರು ಮಾಹಿತಿಗಾಗಿ ಬಂದಿದ್ದರು!
ಮತ್ತೊಂದು ಸ್ಫೋಟಕ ವಿಚಾರವೆಂದರೆ ಈ ಶಂಕಿತರು ಅಲ್‌ಕಾಯಿದಾದ ಸೂಚನೆಯ ಮೇರೆಗೆ ಬೆಂಗಳೂರಿಗೆ ಬಂದು, ಫ‌ುಡ್‌ ಡೆಲಿವರಿ ಬಾಯ್‌ಗಳಾಗಿ ಕೆಲಸಕ್ಕೆ ಸೇರಿಕೊಂಡು ಇಲ್ಲಿನ ಪ್ರದೇಶಗಳ ಬಗ್ಗೆ ತಿಳಿದುಕೊಂಡಿದ್ದರು. ಆದರೆ ಯಾವುದೇ ನೀಲನಕ್ಷೆ ಸಿದ್ಧಪಡಿಸಿರಲಿಲ್ಲ. ಅಖ್ತರ್‌, ಜುಬಾನ್‌ ಜತೆಗೆ ನೆರೆ ರಾಜ್ಯಗಳಲ್ಲಿ ಇರುವ ಇತರ ಐವರು ಸೇರಿ ಒಟ್ಟು 7 ಮಂದಿ ಅಫ್ಘಾನಿಸ್ಥಾನಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಕಾಶ್ಮೀರದ ವರೆಗೆ ಸ್ವಂತ ಖರ್ಚಿನಲ್ಲಿ ಬರಬೇಕು. ಅಲ್ಲಿಂದ ಪಾಕಿಸ್ಥಾನ, ಕೆಲವು ದಿನಗಳ ಬಳಿಕ ಅಫ್ಘಾನ್‌ಗೆ ಕರೆಸಿಕೊಳ್ಳುವುದಾಗಿ 7 ಮಂದಿಗೂ ಸಂಘಟನೆಯವರು ಸೂಚಿಸಿದ್ದರು. ಅದರಂತೆ ಇಬ್ಬರು ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಹೊರಡಲು ಸಿದ್ಧರಾಗಿದ್ದರು. ಉಳಿದ ಐವರು ಯಾರೆಂಬ ಮಾಹಿತಿ ಪಡೆಯಬೇಕಿದೆ ಎಂದು ಮೂಲಗಳು ತಿಳಿಸಿವೆ.

ಹಿಂದುತ್ವದ ವಿರುದ್ಧ ಉರಿ
“ಭಾರತದಲ್ಲಿ ಇರುವ ಕೆಲವು ಉಗ್ರ ಹಿಂದುತ್ವವಾದಿಗಳಿಗೆ ತಕ್ಕ ಪಾಠ ಕಲಿಸಬೇಕು’- ಇದು ನಿಷೇಧಿತ ಅಲ್‌ಕಾಯಿದಾ ಸಂಘಟನೆ ಬಿಡುಗಡೆ ಮಾಡಿರುವ ಪತ್ರದಲ್ಲಿ ಉಲ್ಲೇಖಿಸಲಾಗಿರುವ ಅಂಶ. ಈ ಪತ್ರ ಬಹಿರಂಗವಾಗುತ್ತಿದ್ದಂತೆ ದೇಶಾದ್ಯಂತ ಹೈಅಲರ್ಟ್‌ ಘೋಷಿಸಿ, ಸ್ಲೀಪರ್ ಸೆಲ್‌ಗಳಿಗಾಗಿ ಶೋಧ ಆರಂಭಿಸಲಾಗಿತ್ತು. ಇದರ ನಡುವೆ ನಗರದಲ್ಲಿ ಇಬ್ಬರು ಶಂಕಿತರು ಬಂಧನಕ್ಕೆ ಒಳಗಾಗಿದ್ದಾರೆ. “ದೇಶದಲ್ಲಿರುವ ಪ್ರಬಲ ಹಿಂದೂ ಮುಖಂಡರ ಅಂತ್ಯ ಸನ್ನಿಹಿತವಾಗಿದೆ. ಅವರು ದಿಲ್ಲಿ, ಗುಜರಾತ್‌, ಉತ್ತರ ಪ್ರದೇಶ, ಮುಂಬಯಿ ಸೇರಿ ಎಲ್ಲಿ ಅಡಗಿದರೂ ಬದುಕಲು ಸಾಧ್ಯವಿಲ್ಲ’ ಎಂದೂ ಪತ್ರದಲ್ಲಿ ಬರೆಯಲಾಗಿತ್ತು.

Advertisement

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next