ಗುವಾಹಟಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಸಾವನ್ನಪ್ಪಿದ್ದ ಬೆನ್ನಲ್ಲೇ ಪತಿ, ಅಸ್ಸಾಂ ಸರ್ಕಾರದ ಹಿರಿಯ ಅಧಿಕಾರಿ ತನಗೆ ತಾನೇ ಗುಂಡು ಹೊಡೆದುಕೊಂಡು ಸಾವನ್ನಪ್ಪಿರುವ ಘಟನೆ ಅಸ್ಸಾಂನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:Theft Case: ಪಕ್ಕದ ಮನೆಯ ಬೆಕ್ಕಿಗೆ ಹಾಲು ಹಾಕಲು ಬಂದು ಚಿನ್ನಾಭರಣ ಕದ್ದ ಆರೋಪಿ ಬಂಧನ
ಸಿಲಾದಿತ್ಯ ಚೇಟಿಯಾ ಅವರು ಅಸ್ಸಾಂ ಸರ್ಕಾರದ ಗೃಹ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಭಾರತೀಯ ಪೊಲೀಸ್ ಸೇವೆಯ (IPS) 2009ರ ಬ್ಯಾಚ್ ನ ಅಧಿಕಾರಿ ಚೇಟಿಯಾ ತನ್ನ ಪತ್ನಿ ಸಾವನ್ನಪ್ಪಿದ ಐಸಿಯು ಒಳಗೆ ತನ್ನ ಸರ್ವಿಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.
ಚೇಟಿಯಾ ಅವರ ಪತ್ನಿ ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಚೇಟಿಯಾ ಅವರು ಪತ್ನಿಯ ಆರೈಕೆಗಾಗಿ ಕಳೆದ ನಾಲ್ಕು ತಿಂಗಳಿನಿಂದ ರಜೆಯಲ್ಲಿದ್ದರು. ಮಂಗಳವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಪತ್ನಿ ಕೊನೆಯುಸಿರೆಳೆದಿದ್ದರು.
ನಂತರ ವೈದ್ಯರು ಮತ್ತು ನರ್ಸ್ ಗಳಿಗೆ ದಯವಿಟ್ಟು ಐಸಿಯುನಿಂದ ಸ್ವಲ್ಪ ಸಮಯ ಹೊರಗಿರಿ, ನಾನು ಆಕೆಗಾಗಿ ಪ್ರಾರ್ಥಿಸಬೇಕು ಎಂದಿದ್ದರು. ಕೆಲ ನಿಮಿಷಗಳಲ್ಲಿ ಐಸಿಯುನೊಳಗೆ ಚೇಟಿಯಾ ಅವರು ಗುಂಡು ಹೊಡೆದುಕೊಂಡ ಶಬ್ದ ಕೇಳಿಸಿ, ವೈದ್ಯರು ಹಾಗೂ ನರ್ಸ್ ಒಳ ಹೋಗಿ ನೋಡಿದಾಗ, ಪತ್ನಿಯ ದೇಹದ ಮೇಲೆ ಚೇಟಿಯಾ ಬಿದ್ದಿದ್ದರು. ಅವರ ಜೀವ ಉಳಿಸಲು ಪ್ರಯತ್ನಿಸಲಾಯಿತಾದರೂ, ಎದೆಗೆ ಗುಂಡು ಹೊಡೆದುಕೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ.