ಕೋವಿಡ್ ಕಾಲದಲ್ಲಿ ಕರ್ತವ್ಯ ನಿಷ್ಠೆ ಮೆರೆಯುತ್ತಾ ಗೌರವಕ್ಕೆ ಪಾತ್ರರಾಗಿರುವ ಪೊಲೀಸರು, ತಮ್ಮ ಎಂದಿನ ಕೆಲಸದ ಹೊರತಾಗಿಯೂ ಜನರ ಮನಸ್ಸು ಗೆಲ್ಲುವಂಥ ಇನ್ನಷ್ಟು ಕಾರ್ಯಗಳ ಮೂಲಕ ಮೆಚ್ಚುಗೆಯನ್ನೂ ಗಳಿಸುತ್ತಿದ್ದಾರೆ.
ಅಸ್ಸಾಂನಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ಹಿರಿಯ ನಾಗರಿಕರೊಬ್ಬರಿಗೆ ಪೊಲೀಸರು ನೀಡಿರುವ ಸರ್‌ಪ್ರೈಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಲಾಕ್‌ಡೌನ್‌ನಿಂದಾಗಿ ಕುಟುಂಬ ಸದಸ್ಯರೆಲ್ಲರೂ ದೂರದ ಬೆಂಗಳೂರಿನಲ್ಲಿರುವ ಕಾರಣ, 78 ವರ್ಷದ ಕೆ.ಪಿ.ಅಗರ್ವಾಲ್ ಏಕಾಂಗಿಯಾಗಿ ದಿನ ದೂಡುತ್ತಿದ್ದಾರೆ. ಅವರ 78ನೇ ವರ್ಷದ ಹುಟ್ಟುಹಬ್ಬದ ದಿನ ಅಸ್ಸಾಂನ ಪೊಲೀಸರೇ ಕೇಕ್ ಹಾಗೂ ಸಿಹಿತಿನಿಸಿನೊಂದಿಗೆ ಅವರ ಮನೆಗೆ ತೆರಳಿ, ಶುಭಾಶಯ ಕೋರಿದ್ದಾರೆ.
ಅಲ್ಲದೆ, ಅಗರ್ವಾಲ್ ಅವರ ತಲೆಗೆ ಬರ್ತ್ ಡೇ ಹ್ಯಾಟ್ ಹಾಕಿ, ಅವರಿಗಾಗಿ ಜನುಮದಿನದ ಹಾಡನ್ನೂ ಹಾಡಿ, ಖುಷಿಪಡಿಸಿದ್ದಾರೆ. ಅವರ ಜನುಮದಿನವನ್ನು ವಿಶೇಷವಾಗಿ ಆಚರಿಸಿದ ಹಾಗೂ ಅವರಲ್ಲಿ ಹೊಸ ಹುರುಪು ಮೂಡಿಸಿದ ಪೊಲೀಸರ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.