ಗುವಾಹಟಿ: ಅಸ್ಸಾಂನಲ್ಲಿನ ಪ್ರವಾಹವು 26 ಜಿಲ್ಲೆಗಳ ಮೇಲೆ ಪರಿಣಾಮ ಬೀರಿದ್ದು, ಜುಲೈ 22 ರವರೆಗೆ 89 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ ಡಿಎಂಎ) ತಿಳಿಸಿದೆ.
ಎಎಸ್ ಡಿಎಂಎ ಬುಧವಾರ ನೀಡಿದ ವರದಿಯ ಪ್ರಕಾರ, ಬಾರ್ಪೆಟಾ, ದಿಬ್ರುಘರ್, ಕೊಕ್ರಜಾರ್, ಬೊಂಗೈಗಾಂವ್, ಟಿನ್ಸುಕಿಯಾ, ಇತರ ಜಿಲ್ಲೆಗಳಲ್ಲಿ ಪ್ರವಾಹ ತೀವ್ರವಾಗಿ ಪರಿಣಾಮ ಬೀರಿದ್ದು ಅಪಾರ ನಷ್ಟ ಸಂಭವಿಸಿದೆ. ಮಾತ್ರವಲ್ಲದೆ 26,31,343 ಜನರನ್ನು ಪ್ರವಾಹ ಬಾಧಿಸಿದೆ.
ಬ್ರಹ್ಮಪುತ್ರ ಮತ್ತು ಅದರ ಉಪನದಿಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿರುವ ಕಾರಣ ಸುಮಾರು 2,525 ಗ್ರಾಮಗಳು ಸಂಕಷ್ಟಕ್ಕೀಡಾಗಿದ್ದು, 1,15,515,25 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ನಾಶವಾಗಿದೆ.
ನೆರೆಯ ತೀವ್ರತೆಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ 120ಕ್ಕಿಂತ ಹೆಚ್ಚು ಪ್ರಾಣಿಗಳು ಸಾವನ್ನಪ್ಪಿದ್ದು, 147 ವನ್ಯಜೀವಿಗಳನ್ನು ರಕ್ಷಿಸಲಾಗಿದೆ. ಅದರ ಜೊತೆಗೆ ಹಲವಾರು ಪ್ರಾಣಿಗಳು ನೆರೆಯ ಆರ್ಭಟದಿಂದ ಪಾರಾಗಲು ಎತ್ತರದ ಪ್ರದೆಶಗಳತ್ತ ವಲಸೆ ಹೋಗಿವೆ ಎಮದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸದ್ಯ 42,282 ಜನರು 391 ವಿವಿಧ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ರಾಜ್ಯ ವಿಪ್ಪತ್ತು ನಿರ್ವಹಣಾ ತಂಡ ಮತ್ತು ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ತಂಡ ಮತ್ತು ಸ್ಥಳೀಯರು ಸೇರಿಕೊಂಡು ಸುಮಾರು 452 ಜನರನ್ನು ಪ್ರವಾಹದಿಂದ ರಕ್ಷಿಸಿದ್ದಾರೆ ಎನ್ನಲಾಗಿದೆ.
ತಗ್ಗುಪ್ರದೇಶದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಹಲವೆಡೆ ರಸ್ತೆ, ಸೇತುವೆ ಮಾತ್ರವಲ್ಲದೆ ಮನೆಗಳಿಗೂ ಹಾನಿಯಾಗಿದೆ. ಕೇಂದ್ರ ಸರ್ಕಾರ ಅಸ್ಸಾಂಗೆ ಮೊದಲ ಹಂತದ ಹಣಕಾಸಿನ ನೆರವು 346 ಕೋಟಿ ರೂಪಾಯಿಯನ್ನು ಬುಧವಾರ ಘೋಷಿಸಿದ್ದು, ಕೂಡಲೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಸ್ಥಿತಿಗತಿಯನ್ನು ವಿವರಿಸಿದ್ದು, ಹೆಚ್ಚಿನ ನೆರವು ಕೋರಿದ್ದಾರೆ.