ಗುವಾಹಟಿ : ಅಸ್ಸಾಂ ನಲ್ಲಿ ಸುರಿಯುತ್ತಿರುವ ಜಡಿ ಮಳೆಯಿಂದ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು 62,000ಕ್ಕೂ ಅಧಿಕ ಜನರು ತೀವ್ರವಾಗಿ ಬಾಧಿತರಾಗಿದ್ದಾರೆ.
ಜೋರ್ಹಾಟ್‌ನ ನಿಮತಿ ಘಾಟ್‌ನಲ್ಲಿ ಬ್ರಹ್ಮಪುತ್ರಾ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.
ಅಸ್ಸಾಂ ವಿಕೋಪ ನಿರ್ವಹಣ ಪ್ರಾಧಿಕಾರದ ಪ್ರಕಾರ ಧೇಮಾಜಿ, ಲಖೀಮ್‌ಪುರ, ಬಿಶ್ವನಾಥ್, ಜೋರ್ಹಾಟ್ ಮತ್ತು ಗೋಲಘಾಟ್ ಜಿಲ್ಲೆಗಳು ನೆರೆಯಿಂದ ತೀವ್ರವಾಗಿ ಬಾಧಿತವಾಗಿವೆ.
ರಂಗನೋಡಿ ಹೈಡ್ರೋ ಇಲೆಕ್ಟ್ರಿಕ್ ಪ್ರಾಜೆಕ್ಟ್ ನಿಂದ ಹೆಚ್ಚುವರಿ ನೀರನ್ನು ಲಖೀಮ್‌ಪುರ ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ; ಪರಿಣಾಮವಾಗಿ ಸ್ಥಳೀಯರು ಪ್ರವಾಹ ಪರಿಸ್ಥಿತಿಗೆ ಗುರಿಯಾಗಿದ್ದಾರೆ.
ಜಡಿಮಳೆಯ ಪರಿಣಾಮವಾಗಿ ಗುವಾಹಟಿಯಲ್ಲಿ ಭೂಕುಸಿತ ಉಂಟಾಗಿದೆ. ಪರಿಣಾಮವಾಗಿ ಓರ್ವ ವ್ಯಕ್ತಿ ಮೃತಪಟ್ಟು ಇತರಿಬ್ಬರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.