Advertisement

200ಕ್ಕೂ ಹೆಚ್ಚು ಗ್ರಾಮಗಳು ಜಲಾವೃತ; ಅಸ್ಸಾಂನಲ್ಲಿ ತೀವ್ರಗೊಂಡ ಮಳೆ-ಪ್ರವಾಹ

07:38 PM May 16, 2022 | Team Udayavani |

ನವದೆಹಲಿ: ಧಾರಾಕಾರ ಮಳೆ, ಪ್ರವಾಹ, ಭೂಕುಸಿತ, ಭೂಕಂಪ.ನಿರಂತರ ಪ್ರಾಕೃತಿಕ ವಿಕೋಪದಿಂದ ಅಸ್ಸಾಂ ತತ್ತರಿಸಿದೆ. ಕಳೆದ ಕೆಲವು ದಿನಗಳಿಂದ ಈಶಾನ್ಯ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ಇದರ ನಡುವೆಯೇ 12 ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿದ್ದು, ಮಗು ಸೇರಿದಂತೆ 3 ಮಂದಿ ಮೃತಪಟ್ಟಿದ್ದಾರೆ. ಶನಿವಾರವಷ್ಟೇ ಪ್ರವಾಹಕ್ಕೆ 3 ಮಂದಿ ಬಲಿಯಾಗಿದ್ದರು.

Advertisement

ಇನ್ನೊಂದೆಡೆ, ಅಸ್ಸಾಂನಲ್ಲಿ ಮತ್ತು ಮೇಘಾಲಯದಲ್ಲಿ ಸೋಮವಾರ 24 ಗಂಟೆಗಳ ಅವಧಿಯಲ್ಲಿ 3.4 ತೀವ್ರತೆಯಲ್ಲಿ ಭೂಮಿಯು ಎರಡು ಬಾರಿ ಕಂಪಿಸಿದೆ. ಯಾವುದೇ ಸಾವು ನೋವು, ಆಸ್ತಿಪಾಸ್ತಿ ಹಾನಿ ವರದಿಯಾಗಿಲ್ಲ.

ಡಿಕೋಕ್‌ಚೆರ್ರಾ ರೈಲು ನಿಲ್ದಾಣದಲ್ಲಿ ಮಳೆ ಹಾಗೂ ಪ್ರವಾಹದಿಂದ ಹಳಿಗಳು ಮುಳುಗಡೆಯಾಗಿದ್ದು, ನೂರಾರು ಮಂದಿ ನಿಲ್ದಾಣದಲ್ಲೇ ಸಿಲುಕುವಂತಾಗಿದೆ. ಈ ಹಿನ್ನೆಲೆಯಲ್ಲಿ 119 ಪ್ರಯಾಣಿಕರನ್ನು ವಾಯುಪಡೆ ಹೆಲಿಕಾಪ್ಟರ್‌ಗಳ ಮೂಲಕ ಏರ್‌ಲಿಫ್ಟ್ ಮಾಡಲಾಗಿದೆ. ಪ್ರವಾಹದಿಂದಾಗಿ ರಸ್ತೆಗಳು, ಸೇತುವೆ, ನೀರಾವರಿ ಕಾಲುವೆಗಳು ಹಾನಿಗೀಡಾಗಿವೆ.

ಹಿಮಾಚಲದಲ್ಲೂ ಮಳೆ:
ಹಿಮಾಚಲ ಪ್ರದೇಶದಲ್ಲೂ ಮಳೆ ಅಬ್ಬರಿಸತೊಡಗಿದ್ದು, ಬುಧವಾರದವರೆಗೂ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅರುಣಾಚಲ ಪ್ರದೇಶದಲ್ಲಿ ಸೋಮವಾರ ಸಂಭವಿಸಿದ ಭೂಕುಸಿತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಹವಾಮಾನ ವೈಪರೀತ್ಯ: ಪರಿಸ್ಥಿತಿ ವಿಕೋಪಕ್ಕೆ
ಒಂದೇ ದೇಶ. ಆದರೆ, ಒಂದು ಕಡೆ ಮಳೆ-ಪ್ರವಾಹ, ಮತ್ತೊಂದು ಕಡೆ ಬಿಸಿಗಾಳಿ, ಮಗದೊಂದು ಕಡೆ ಭೂಕುಸಿತ. ಇದು ಭಾರತದಲ್ಲಿ ಹೆಚ್ಚುತ್ತಿರುವ ಹವಾಮಾನ ವೈಪರೀತ್ಯದ ಚಿತ್ರಣ.

Advertisement

ದೆಹಲಿಯಲ್ಲಿ ಬಿಸಿಲಿನ ಝಳವು 49 ಡಿ.ಸೆ. ದಾಟಿದ್ದರೆ, ದಕ್ಷಿಣದ ರಾಜ್ಯಗಳಲ್ಲಿ ಮಳೆ ತಾಂಡವವಾಡುತ್ತಿದೆ, ಈಶಾನ್ಯದಲ್ಲಿ ಪ್ರವಾಹ, ಭೂಕುಸಿತವು ಜನಜೀವನವನ್ನು ತತ್ತರಿಸಿದೆ. ಮುಂದಿನ ದಿನಗಳಲ್ಲಿ ಭಾರತವು ಇಂತಹ ಮತ್ತಷ್ಟು ವೈಪರೀತ್ಯಗಳಿಗೆ ಸಾಕ್ಷಿಯಾಗಲಿದೆ ಎಂದು ಪರಿಸರ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಅಸ್ಸಾಂ ಭೂಕುಸಿತದಿಂದ ಮೃತಪಟ್ಟವರು- 3
ಪ್ರವಾಹದಿಂದ ನಿರ್ವಸಿತರಾದವರು – 57,000
ಜಲಾವೃತಗೊಂಡ ಗ್ರಾಮಗಳು- 222
ಮುಳುಗಿದ ಕೃಷಿ ಭೂಮಿ- 10,321.44 ಹೆಕ್ಟೇರ್‌
ಹಾನಿಗೀಡಾದ ಮನೆಗಳು – 200

Advertisement

Udayavani is now on Telegram. Click here to join our channel and stay updated with the latest news.

Next