ಗುವಾಹಟಿ (ಅಸ್ಸಾಂ): ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಭಾರೀ ಮಳೆಯಿಂದಾಗಿ
ಪ್ರವಾಹ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದು ಕೊಂಡಿದೆ.
ಪ್ರವಾಹದಿಂದ 29 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಶುಕ್ರವಾರ ಬಹಿರಂಗಪಡಿಸಿದೆ.
ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಹಲವು ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಲಖಿಂಪುರ, ಧೇಮಾಜಿ, ದಿಬ್ರುಗಢ, ಕ್ಯಾಚಾರ್, ನಲ್ಬರಿ ಮತ್ತು ಕಾಮ್ರೂಪ್ ಜಿಲ್ಲೆಗಳ 25 ಗ್ರಾಮಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಪ್ರವಾಹ ವರದಿಯ ಪ್ರಕಾರ, ಅಸ್ಸಾಂನಲ್ಲಿ 215 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಲಖಿಂಪುರ ಜಿಲ್ಲೆಯೊಂದರಲ್ಲೇ 1215 ಮಕ್ಕಳು ಮತ್ತು 23,516 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಪ್ರವಾಹ ಪೀಡಿತ ಲಖೀಂಪುರ ಜಿಲ್ಲೆಯಲ್ಲಿ ಮೂರು ಪರಿಹಾರ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ.
ಅಸ್ಸಾಂ ರಾಜ್ಯದಲ್ಲಿ 6,307 ಪ್ರಾಣಿಗಳು ಮತ್ತು ಹಲವು ಕೋಳಿಗಳು ಪ್ರವಾಹದ ನೀರಿನಿಂದ ಹಾನಿಗೊಳಗಾಗಿವೆ.
ಧೇಮಾಯಿ, ಬಿಸ್ವನಾಥ್, ಗೋಲ್ಪಾರಾ ಮತ್ತು ಲಖಿಂಪುರ ಜಿಲ್ಲೆಗಳ ರಸ್ತೆಗಳು ಪ್ರವಾಹದ ನೀರಿನ ಹರಿವಿನಿಂದ ಹಾಳಾಗಿವೆ.ಕ್ಯಾಚಾರ್ ಮತ್ತು ಕಮ್ರೂಪ್ (ಮೆಟ್ರೋ) ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಅನೇಕ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ.