ದೇಶಾದ್ಯಂತ ಕೋವಿಡ್ ಕೇಕೆ ಮುಂದುವರೆದಿರುವಂತೆಯೇ ಆಫ್ರಿಕ ಹಂದಿ ಜ್ವರದ (ಎಎಸ್‌ಎಫ್) ಪ್ರಕರಣ ಅಸ್ಸಾಂನಲ್ಲಿ ಕಾಣಿಸಿಕೊಂಡಿದೆ.
ಇದು ದೇಶದಲ್ಲಿಯೇ ಮೊದಲ ಕೇಸ್ ಆಗಿದ್ದು, 2,500 ಹಂದಿಗಳು ಸಾವನ್ನಪ್ಪಿವೆ ಎಂದು ಆರೋಗ್ಯ ಸಚಿವ ಅತುಲ್ ಬೋರಾ ತಿಳಿಸಿದ್ದಾರೆ.
ಅಸ್ಸಾಂನ 7 ಜಿಲ್ಲೆಗಳ 306 ಗ್ರಾಮಗಳಲ್ಲಿ ಈ ಜ್ವರ ಕಂಡು ಬಂದಿದೆ. 2,500ಕ್ಕೂ ಹೆಚ್ಚು ಹಂದಿಗಳು ಮೃತಪಟ್ಟಿವೆ. ಈ ಜ್ವರಕ್ಕೂ ಕೋವಿಡ್ -19ಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಪಶುಸಂಗೋಪನೆ ಸಚಿವ ಅತುಲ್ ಬೋರಾ ತಿಳಿಸಿದ್ದಾರೆ.
ಭೋಪಾಲ್‌ನ ರಾಷ್ಟ್ರೀಯ ಪ್ರಾಣಿಗಳ ಸಂಶೋಧನೆ ಸಂಸ್ಥೆಯು, ಈ ಕಾಯಿಲೆಯನ್ನು ಆಫ್ರಿಕ ಹಂದಿ ಜ್ವರ ಎಂದು ದೃಢಪಡಿಸಿದೆ. ಇಂಥ ಪ್ರಕರಣ ದೇಶದಲ್ಲಿಯೇ ಮೊದಲನೇಯದ್ದು ಎಂದು ಕೇಂದ್ರ ಸರಕಾರ ಕೂಡ ತಿಳಿಸಿದೆ.
ಹಂದಿಗಳನ್ನು ಸಾಯಿಸದೆ, ಜ್ವರ ನಿಯಂತ್ರಿಸಲು ಸಾಧ್ಯವೇ ಎಂಬುದರ ಕುರಿತು ತಜ್ಞರೊಂದಿಗೆ ಚರ್ಚೆ ನಡೆಸಲಾಗುವುದು. ಈ ಜ್ವರ ಕಾಣಿಸಿಕೊಂಡ ಪ್ರದೇಶದಲ್ಲಿ ಹಂದಿಗಳ ಮರಣ ಪ್ರಮಾಣ ಬಹುತೇಕವಾಗಿ ಶೇ.100ರಷ್ಟು ಇದೆ.
ಫೆಬ್ರವರಿಯಲ್ಲಿ ಮೊದಲ ಬಾರಿಗೆ ಈ ಜ್ವರ ಕಾಣಿಸಿಕೊಂಡಿದೆ. 2019ರ ಎಪ್ರಿಲ್‌ನಲ್ಲಿ ಚೀನದ ಗಡಿಯಲ್ಲಿ ಕಂಡು ಬಂದಿತ್ತು. ಇದೀಗ ಅರುಣಾಚಲ ಪ್ರದೇಶವನ್ನು ದಾಟಿ ಅಸ್ಸಾಂಗೂ ತಗುಲಿರುವ ಸಾಧ್ಯತೆ ಇದೆ ಎಂದು ಅತುಲ್ ಬೋರಾ ತಿಳಿಸಿದ್ದಾರೆ.