ಹುಣಸೂರು: ಹುಣಸೂರು ತಾಲೂಕಿನ ಆಸ್ಪತ್ರೆ ಕಾವಲ್ ಗ್ರಾಮ ಪಂಚಾಯ್ತಿಯ ತೆರವಾಗಿದ್ದ ಅಧ್ಯಕ್ಷ (ಬಿಸಿಎಂ(ಎ) ಮಹಿಳೆ) ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ, ಬಲ್ಲೇನಹಳ್ಳಿ ಸದಸ್ಯೆ ಮುಕ್ಸುದಾಬಾನು 15 ಮತಗಳಿಸಿ ವಿಜಯಿಯಾದರು.
ಆಂತರಿಕ ಒಪ್ಪಂದದಂತೆ ಈ ಹಿಂದಿನ ಅಧ್ಯಕ್ಷೆ ನಿರೋಷಾರವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಮುಕ್ಸುದಾಬಾನು 15 ಮತ ಪಡೆಯು ಅಧ್ಯಕ್ಷರಾಗಿ ಆಯ್ಕೆಯಾದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿಯ ರತ್ನಪುರಿಯ ರಜಿಯಾ ಬಾನು 9ಮತಗಳಿಸಿ ಪರಾಭವಗೊಂಡರು. ಗ್ರಾ.ಪಂ.ನ ಎಲ್ಲ 24 ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು.
ವಿಜಯೋತ್ಸವ: ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಗ್ರಾ.ಪಂ.ಹೊರಗೆ ಪಟಾಕಿ ಸಿಡಿಸಿ, ಸಿಹಿಹಂಚಿ, ಪಕ್ಷದ ಬಾವುಟ ಹಿಡಿದು ಜಯಘೋಷ ಹಾಕಿ ಸಂಭ್ರಮಿಸಿದರು.
ಈ ವೇಳೆ ತಾಲೂಕು ಜೆಡಿಎಸ್‌ಅಧ್ಯಕ್ಷ ದೇವರಹಳ್ಳಿಸೋಮಶೇಖರ್, ಉಪಾಧ್ಯಕ್ಷ ದೇವರಾಜ್‌ಒಡೆಯರ್, ಮೈಮುಲ್ ನಿರ್ದೇಶಕ ಕೆ.ಎಸ್.ಕುಮಾರ್, ಗ್ರಾ.ಪಂ.ಅಧ್ಯಕ್ಷ ಮುದಗನೂರುಸುಭಾಷ್, ಟಿಎಪಿಸಿಎಂಎಸ್ ಅಧ್ಯಕ್ಷ ಕೆಂಪೇಗೌಡ, ನಗರಸಭೆ ಸದಸ್ಯರಾದ ಕೃಷ್ಣರಾಜಗುಪ್ತ, ಶರವಣ, ಸತೀಶ್ ಕುಮಾರ್, ಶ್ರೀನಾಥ್, ಜಿ.ಪಂ.ಮಾಜಿ ಸದಸ್ಯ ಸುರೇಂದ್ರ, ಮುಖಂಡರಾದ ಸತೀಶ್‌ಪಾಪಣ್ಣ, ಪ್ರಭು, ಬಸವಲಿಂಗಯ್ಯ, ವೆಂಕಟೇಶ್, ಆರ್.ಸ್ವಾಮಿ, ಧಣಿಕುಮಾರ್,ವಿಶ್ವನಾಥ, ಸೇರಿದಂತೆ ಅನೇಕರಿದ್ದರು.
ನೂತನ ಅಧ್ಯಕ್ಷೆ ಮುಕ್ಸುದಾಬಾನುರನ್ನು ಅಭಿನಂದಿಸಿದ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್‌ಗೌಡರು ಹಿಂದಿನ ಅಧ್ಯಕ್ಷೆ ನಿರೋಷಾ ಸೇರಿದಂತೆ ಕಾಂಗ್ರೆಸ್ ಹಿಡಿತದಲ್ಲಿದ್ದ 15 ಸದಸ್ಯರು ಸೇರಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿದ್ದು, ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ದಿಗೆ ಶ್ರಮಿಸುವಂತೆ ಸೂಚಿಸಿದರು.