ಬಹುನಿರೀಕ್ಷೆಯ ಅವನೇ ಶ್ರೀಮನ್ನಾರಾಯಣ ಚಿತ್ರ ಬಿಡುಗಡೆಯಾಗಿದೆ. ಮೂರು ವರ್ಷ ಗಳ ನಂತರ ತೆರೆಮೇಲೆ ಬಂದ ರಕ್ಷಿತ್ ಶೆಟ್ಟಿ ಯನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಚಿತ್ರದ ಬಗ್ಗೆ ಹೇಳುವುದಾದರೆ ಇದೊಂದು ಕಾಲ್ಪನಿಕ ಜಗತ್ತಿನಲ್ಲಿ ನಡೆಯುವ ಕಥಾನಕ. ಅಭಿರ ವಂಶದ ರಾಜ ಹಾಗೂ ಆತನದ್ದೇ ಅದ ಕೋಟೆ, ಆಡಳಿತದಿಂದ ಆರಂಭವಾಗುವ ಸಿನಿಮಾ ಮುಂದೆ ನಿಧಿಯೊಂದರ ಶೋಧಕ್ಕೆ ತೆರೆದುಕೊಳ್ಳುತ್ತದೆ. ಇದೇ ಸಿನಿಮಾದ ನಿಜವಾದ ಜೀವಾಳ. ನಾರಾಯಣ ಎಂಬ ಬುದ್ಧಿವಂತ ಪೊಲೀಸ್ ನಾಟಕಕಾರರು ಕಳವು ಮಾಡಿ ಹೂತಿಟ್ಟ ನಿಧಿಯನ್ನು ಹೇಗೆ ಹುಡುಕುತ್ತಾನೆ ಮತ್ತು ಅದಕ್ಕೆ ಆತ ಅನುಸರಿಸುವ ದಾರಿ ಹಾಗೂ ಎದುರಾಗುವ ಸವಾಲುಗಳೇ ಸಿನಿಮಾವನ್ನು ಮುಂದೆ ಸಾಗಿಸುತ್ತವೆ. ಚಿತ್ರದ ಕಥೆ ಗಂಭೀರವಾಗಿದೆ. ಆದರೆ ನಿರೂಪಣೆಯಲ್ಲಿ ಆ ಗಂಭೀರತೆ ಇಲ್ಲ. ಅದು ಪ್ರೇಕ್ಷಕರನ್ನುರಂಜಿಸುವ ಉದ್ದೇಶದ ಒಂದು ವಿಧಾನದಂತೆ ಕಂಡುಬರುತ್ತದೆ.ಮುಖ್ಯವಾಗಿ ನಾರಾಯಣ ಪಾತ್ರವನ್ನು ಹೆಚ್ಚು ಗಂಭೀರಗೊಳಿಸದೇ, ಆ ಪಾತ್ರದ ಅಟಿಟ್ಯೂಡ್ ಮೂಲಕವೇ ನಗಿಸುವ ಪ್ರಯತ್ನ ಮಾಡಲಾಗಿದೆ.
ಅದ್ಧೂರಿ ಮೇಕಿಂಗ್ ಇರುವ ನಾರಾಯಣನ ನಿರೂಪಣೆಯಲ್ಲಿ ಮತ್ತಷ್ಟು ಹರಿತಬೇಕಿತ್ತು. ಇಲ್ಲಿನೇರ ನಿರೂಪಣೆ ಇಲ್ಲ.ಮೂಲ ಕಥೆಗೆ ಲಿಂಕ್ ಕೊಡುವ ಅನೇಕ ಸನ್ನಿವೇಶಗಳು ಅಲ್ಲಲ್ಲಿ ಬರುತ್ತವೆ. ಎಲ್ಲೋ ಒಂದು ಸನ್ನಿವೇಶಕ್ಕೆ ಸಂಬಂಧಿಸಿದ ಕೊಂಡಿಯನ್ನು ಇನ್ನೆಲ್ಲೋ ಇಟ್ಟಿರುತ್ತಾರೆ. ಈ ತರಹದ ಜಾಣ್ಮೆ ಯ ನಿರೂಪಣೆ ಇದ್ದರೂ ಸಾಮಾನ್ಯ ಪ್ರೇಕ್ಷಕನಿಗೆ ಒಮ್ಮೆಗೇ ಎಲ್ಲವನ್ನು ರೀಕಾಲ್ ಮಾಡಿಕೊಂಡು ಸನ್ನಿವೇಶ ಜೋಡಿಸೋದು ತುಸು ಕಷ್ಟ. ಜೊತೆಗೆ ಚಿತ್ರದ ಅವಧಿಯಲ್ಲೂಕಡಿತಗೊಳಿಸುವ ಅವಕಾಶವಿತ್ತು. ಅದರಾಚೆ ಹೇಳುವುದಾದರೆ ಒಂದು ಹೊಸ ಬಗೆಯ ಪ್ರಯತ್ನವಾಗಿ ಚಿತ್ರ ಇಷ್ಟವಾಗುತ್ತದೆ. ಗಾಂಧಿನಗರದ ಸಿದ್ಧಸೂತ್ರಗಳನ್ನು ಮುಲಾಜಿಲ್ಲದೇ ಬದಿಗೆ ಸರಿಸಿ, ಹೊಸ ಬಗೆಯಲ್ಲಿ ಸಿನಿಮಾ ಕಟ್ಟಿ ಕೊಟ್ಟ ತಂಡದ ಶ್ರಮವನ್ನುಮೆಚ್ಚಬೇಕು. ಚಿತ್ರದಲ್ಲಿಬರುವ ಸೂಕ್ಷ್ಮ ಅಂಶಗಳ ಬಗ್ಗೆಯೂ ಚಿತ್ರತಂಡ ಗಮನಹರಿಸಿರುವುದು ತೆರೆಮೇಲೆ ಕಾಣುತ್ತದೆ.
ಬಹುತೇಕ ಚಿತ್ರ ಸೆಟ್ನಲ್ಲೇ ನಡೆಯುತ್ತದೆ. ಅದು ಕಥೆಗೆ ಪೂರಕವಾಗಿದೆ ಕೂಡಾ. ಮುಖ್ಯವಾಗಿ ಇಡೀ ಕಥೆಯನ್ನು ಹೊತ್ತು ಸಾಗಿರೋದು ನಾಯಕ ನಟ ರಕ್ಷಿತ್ ಶೆಟ್ಟಿ. ನಾರಾಯಣ ಎಂಬ ಬುದ್ಧಿವಂತ ಪೊಲೀಸ್ ಆಫೀಸರ್ ಆಗಿ, ಶ್ರೀಹರಿಯಾಗಿ ಪಾತ್ರವನ್ನು ಎಂಜಾಯ್ ಮಾಡಿಕೊಂಡು ಮಾಡಿದ್ದಾರೆ. ಕಿಲಾಡಿ, ಬುದ್ಧಿವಂತ, ಪ್ರೇಮಿ ಹೀಗೆ ರಕ್ಷಿತ್ ಇಷ್ಟವಾಗುತ್ತಾರೆ. ಅವರಿಗೆ ನಾಯಕಿ ಶಾನ್ವಿ ಸಾಥ್ ನೀಡಿದ್ದಾರೆ. ಉಳಿದಂತರ ಅಚ್ಯುತ್, ಬಾಲಾಜಿ, ಪ್ರಮೋದ್ ನಟಿಸಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಹೊಸ ಬಗೆಯ ಸಿನಿಮಾ ನೋಡುವವರು ಒಮ್ಮೆನಾರಾಯಣನ ಬಾಗಿಲು ಬಡಿಯಬಹುದು.
ರವಿಪ್ರಕಾಶ್ ರೈ