ಮುಂಬಯಿ : “ತಲೆ ಕೂದಲನ್ನು ಸರಿಯಾಗಿ ಕತ್ತರಿಸಿಕೊಂಡು ಬರಬೇಕು; ಕ್ಲಾಸಿನಲ್ಲಿ ಕ್ಯಾಪ್ ಧರಿಸಬಾರದು’ ಎಂದು ಹೇಳಿದ ಕಾರಣಕ್ಕೆ ಕೋಪೋದ್ರಿಕ್ತನಾದ ಇಲ್ಲಿನ ಜೋಗೇಶ್ವರಿ ಮಾತಾ ಸೆಕೆಂಡರಿ ಮತ್ತು ಜೂನಿಯರ್ ಕಾಲೇಜಿನ 18ರ ಹರೆಯದ ವಿದ್ಯಾರ್ಥಿ ಸುನೀಲ್ ಭೋರ್ ಎಂಬಾತ ಇಬ್ಬರು ಪ್ರೊಫೆಸರ್‌ಗಳಿಗೆ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಸುನೀಲ್ ಭೋರ್ ನಿಂದ ಇರಿತಕ್ಕೆ ಗುರಿಯಾದ ಪ್ರೊಫೆಸರ್‌ಗಳೆಂದರೆ ಧನಂಜಯ್ ಆಬ್ನವೇ (30) ಮತ್ತು ದರ್ಶನ್ ಚೌಧರಿ (30). ಇವರಿಬ್ಬರು ಪ್ರಕೃತ ವಘೋಲಿ ಯಲ್ಲಿನ ಐಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
“ನಿನ್ನೆ ಶುಕ್ರವಾರ ವಿದ್ಯಾರ್ಥಿ ಸುನೀಲ್ ಭೋರ್ ತನ್ನ ಕ್ಲಾಸ್ ಟೀಚರ್ ಆಗಿರುವ ಪ್ರೊ| ಆಬ್ನವೇ ಅವರಿಗೆ ಚೂರಿಯಿಂದ ಇರಿಯುತ್ತಿದ್ದುನ್ನು ನಾನು ಕಂಡೆ; ಒಡೆನೆಯೇ ತಡೆಯಲು ಹೋದೆ; ಆತ ನನ್ನನ್ನೂ ಚೂರಿಯಿಂದ ಇರಿದ’ ಎಂದು ಪ್ರೊ| ಚೌಧರಿ ಹೇಳಿದ್ದಾರೆ.
“ನನ್ನ ಮಗನ ಬಗ್ಗೆ ಈ ಹಿಂದೆಯೂ ಅಶಿಸ್ತಿನ, ದುರ್ವರ್ತನೆಯ ದೂರುಗಳು ಬಂದಿದ್ದವು; ಆದರೆ ನಾನು ಅವುಗಳನ್ನು ಕಡೆಗಣಿಸಿದ್ದೆ; ಈಗ ಅದರ ಪರಿಣಾಮವನ್ನು ನಾವು ಅನುಭವಿಸುತ್ತಿದ್ದೇವೆ’ ಎಂದು ಮಾರಣಾಂತಿಕ ಹಲ್ಲೆ ಆರೋಪಿ ಸುನೀಲ್ ಭೋರ್ ನ ತಂದೆ ಹೇಳಿದ್ದಾರೆ.
ಪ್ರಕರಣದ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಎಸ್‌ಐ ಅಣ್ಣಾಸಾಹೇಬ್ ತಾಪರೆ “ತಲೆಮರೆಸಿಕೊಂಡಿರುವ ಆರೋಪಿ ಸುನೀಲ್ ನನ್ನು ನಾವು ಬೇಗನೆ ಬಂಧಿಸಲಿದ್ದೇವೆ’ ಎಂದು ಹೇಳಿದ್ದಾರೆ.