ಕೋಲ್ಕತಾ: ವಿಮಾನದಲ್ಲಿ ಸಾಗಿಸಲು ಬಯಸಿದ ಹೆಚ್ಚುವರಿ ಲಗೇಜ್‌ಗೆ ಪಾವತಿ ಮಾಡುವಂತೆ ಕೇಳಿದಾಗ ರಂಪಾಟ ಮಾಡಿದ ಆರೋಪದ ಮೇಲೆ ಹಿರಿಯ ಪೊಲೀಸ್ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಅನಿರ್ಬನ್ ರೇ ಎಂಬ 1998-ಬ್ಯಾಚ್ ನ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಪಶ್ಚಿಮ ಬಂಗಾಳ ಪೊಲೀಸ್‌ನಲ್ಲಿ ಹೆಚ್ಚುವರಿ ಮಹಾನಿರ್ದೇಶಕ (ನಿಬಂಧನೆ) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಐಪಿಸಿ ಸೆಕ್ಷನ್ 323, 341, 505 (ಸಾರ್ವಜನಿಕ ಕಿರುಕುಳ ಉಂಟುಮಾಡುವುದು) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬಿಧಾನನಗರ ನಗರ ಪೊಲೀಸ್ ಉಪ ಆಯುಕ್ತ (ವಿಮಾನ ನಿಲ್ದಾಣ) ಐಶ್ವರ್ಯ ಸಾಗರ್ ತಿಳಿಸಿದ್ದಾರೆ.
“ಭಾನುವಾರ ಮಧ್ಯಾಹ್ನ ಘಟನೆ ನಡೆದಿದ್ದು, ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ. ತನಿಖೆ ಆರಂಭಿಸಲಾಗಿದೆ. ಕೋಲ್ಕತಾ ವಿಮಾನ ನಿಲ್ದಾಣದಿಂದ ರೇ ಅವರು ದೆಹಲಿಗೆ ವಿಮಾನದಲ್ಲಿ ತೆರಳಬೇಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನ ಪ್ರಕಾರ, ಅವರು ವಿಮಾನ ನಿಲ್ದಾಣದ ಸಿಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು,ಹೆಚ್ಚುವರಿ ಲಗೇಜ್‌ಗೆ ಹಣ ಕೇಳಿದಾಗ ಗಲಾಟೆ ಮಾಡಿದ್ದಾರೆ. ಘಟನೆಯ ನಂತರ, ಅವರನ್ನು ವಿಮಾನ ಹತ್ತಲು ಅನುಮತಿಸದೇ ವಿಮಾನ ನಿಲ್ದಾಣದಿಂದ ಹೊರಗೆ ಕರೆದೊಯ್ಯಲಾಗಿದೆ.