ಮುಂಬಯಿ : ಜನಪ್ರಿಯ ಟಿವಿ ಶೋ ‘ದಿ ಗ್ರೇಟ್ ಇಂಡಿಯನ್ ಲಾಫರ್ ಚಾಲೆಂಜ್’ ನಲ್ಲಿ ಪ್ರತಿಭಾವಂತ ಮಿಮಿಕ್ರಿ ಕಲಾವಿದನೊಬ್ಬ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಹಾಸ್ಯಮಯವಾಗಿ ಬಿಂಬಿಸಿರುವ ವಿಡಿಯೋ ವೈರಲ್ ಆಗಿದ್ದು, ಹೊಸ ವಿವಾದ ಸೃಷ್ಟಿಸಿದೆ.
ರಾಜಕಾರಣಿಗಳ ಮಿಮಿಕ್ರಿ ಮಾಡುವ ಮೂಲಕ ಸಾಮಾಜಿಕ ತಾಣಗಳಲ್ಲಿ ಖ್ಯಾತಿ ಪಡೆದಿದ್ದ ರಾಜಸ್ತಾನದ ಗಂಗಾನಗರದ 22 ರ ಹರೆಯದ ಶ್ಯಾಮ್ ರಂಗೀಲಾ ಎಂಬ ಕಲಾವಿದನಿಗೆ ಅಕ್ಷಯ್ ಕುಮಾರ್ ತೀರ್ಪುಗಾರರಾಗಿರುವ ಶೋಗೆ ಸ್ಪರ್ಧಿಯಾಗಿ ಆಹ್ವಾನಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರ ಮಿಮಿಕ್ರಿಯನ್ನು ಹಾಸ್ಯಮಯವಾಗಿ ಮಾಡಿ ಕೇಲ ವಿಚಾರಗಳನ್ನು ಲೇವಡಿ ಮಾಡಲಾಗಿತ್ತು. ಕಾರ್ಯಕ್ರಮದ ವಿಡಿಯೋ ಟಿವಿಯಲ್ಲಿ ಪ್ರಸಾರವಾಗುವ ಮುನ್ನವೇ ಸಾಮಾಜಿಕ ತಾಣಗಳಲ್ಲಿ ಲೀಕ್ ಆಗಿ ವೈರಲ್ ಆಗಿತ್ತು.
‘ಕೆಲವರು ಈ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದು, ಪ್ರಧಾನಿ ಅವರ ಮಿಮಿಕ್ರಿಯನ್ನು ಹಾಸ್ಯದ ವಸ್ತುವನ್ನಾಗಿ ಮಾಡಿಕೊಳ್ಳಬೇಡ’ ಎಂದು ಮನವಿ ಮಾಡಿದ್ದಾರೆ ಎಂದು ಶ್ಯಾಮ್ ರಂಗೀಲಾ ಹೇಳಿಕೊಂಡಿದ್ದಾರೆ.
‘ನನಗಾಗಲಿ, ಚಾನಲ್‌ಗಾಗಲಿ ಯಾರನ್ನೂ ಲೇವಡಿ ಮಾಡುವ ಉದ್ದೇಶವೇ ಇರಲಿಲ್ಲ. ಹಾಸ್ಯ ಮಾಡುವುದೇ ಮುಖ್ಯ ಉದ್ದೇಶವಾಗಿತ್ತು. ವಿವಾದವಾಗುವುದು ನನಗೆ ಇಷ್ಟವಿಲ್ಲ.ಟಿವಿಯಲ್ಲಿ ಪ್ರಸಾರವಾಗದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಇದು ಹೇಗೆ ಸಾಧ್ಯವಾಯಿತು ಎನ್ನುವುದು ನನಗೆ ತಿಳಿದಿಲ್ಲ. ಪ್ರೊಡಕ್ಷನ್ ಹೌಸ್‌ನ ಕೆಲವರು ಹರಿಯ ಬಿಟ್ಟಿರಬಹುದು’ಎಂದು ನೋವು ತೋಡಿಕೊಂಡಿದ್ದಾರೆ.
ಶೂಟಿಂಗ್ ನಡೆದು ತಿಂಗಳ ಬಳಿಕ ಮೋದಿ ಮತ್ತು ರಾಹುಲ್ ಅವರ ಕುರಿತಾಗಿನ ಹಾಸ್ಯ ವಿವಾದಕ್ಕೆ ಕಾರಣವಾಗುತ್ತದೆ ಎಂದು ತಿಳಿದು ಅತ್ಯಲ್ಪ ಅವಧಿಯೊಳಗೆ ಹೊಸ ವಿಚಾರದೊಂದಿಗೆ ಹಾಸ್ಯ ಮಾಡಲು ನನಗೆ ಚಾನೆಲ್ ಹೇಳಿತ್ತು. ಆದರೆ 1 ವಾರದ ಒಳಗೆ ನನಗೆ ಸಿದ್ದವಾಗಿ ಬಂದು ಸ್ಫರ್ಧಿಸುವುದು ಕಷ್ಟವಾಗಿತ್ತು. ಇದು ನಾನು ಸ್ಪರ್ಧೆಯಿಂದ ಹೊರ ಬೀಳಲು ಪ್ರಮುಖ ಕಾರಣ ಎಂದು ರಂಗೀಲಾ ಹೇಳಿದ್ದಾರೆ.