Advertisement

ಕೇಳಿದ್ದೆಲ್ಲಾ ಕೊಡುತಾನೆ ಕೊಟ್ಟೂರೇಶ್ವರ

08:02 PM Nov 08, 2019 | Lakshmi GovindaRaju |

ಕಂದಾಚಾರ, ಮೂಡನಂಬಿಕೆಗಳ ವಿರುದ್ಧ ಹೊರಾಡಿದ ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಶ್ರೀ ಗುರು ಕೊಟ್ಟೂರೇಶ್ವರನ ನೆಲವೀಡು. ಇಲ್ಲಿನ ಐದು ಮಠಗಳಿಗೆ ಭಕ್ತರು ಭೇಟಿ ನೀಡಿ ಪುನೀತರಾಗುತ್ತಾರೆ.

Advertisement

ಬಳ್ಳಾರಿ ಜಿಲ್ಲೆಯ ಕೊಟ್ಟೂರು, ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು. ಕಂದಾಚಾರ, ಮೂಡನಂಬಿಕೆಗಳ ವಿರುದ್ಧ ಹೋರಾಡಿದ ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಶ್ರೀ ಗುರು ಕೊಟ್ಟೂರೇಶ್ವರನ ನೆಲವೀಡು. ಇಲ್ಲಿ ಗುರು ಬಸವಲಿಂಗನಿಗೆ ಸೇರಿದ ಗಚ್ಚಿನ ಮಠ, ತೊಟ್ಟಿಲು ಮಠ, ಮೂರಕಲ್ಲು ಮಠ, ದರ್ಬಾರು ಹಿರೇಮಠ ಹಾಗೂ ಮರಿ ಕೊಟ್ಟೂರೇಶ್ವರ… ಹೀಗೆ ಒಟ್ಟು ಐದು ಮಠಗಳಿವೆ! ಹೆಚ್ಚಿನ ಸಂಖ್ಯೆಯ ಭಕ್ತರು ಹಿರೇಮಠದಲ್ಲಿ ಸ್ವಾಮಿಯ ದರ್ಶನ ಮಾಡುತ್ತಾರೆ. ಈ ದೇಗುಲ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದು, “ದಾಸೋಹ ಟ್ರಸ್ಟ್‌’ ಇಲ್ಲಿ ನಿತ್ಯ ಅನ್ನ ದಾಸೋಹ ನಡೆಸುತ್ತಿದೆ.

ಭಕ್ತರಿಂದ ಅನ್ನ ದಾಸೋಹ: ಕಾರ್ತೀಕದಲ್ಲಿ ಮೂರು ದಿನ ಮತ್ತು ರಥೋತ್ಸವದ ವೇಳೆ ಏಳೆಂಟು ದಿನಗಳ ಕಾಲ ದಾಸೋಹ ಇರುವುದಿಲ್ಲ. ಈ ದಿನಗಳಲ್ಲಿ ಹೊರಗಿನಿಂದ ಬಂದ ಭಕ್ತರೇ ಪ್ರಸಾದ ಸೇವೆ ನಡೆಸುತ್ತಾರೆ. ಪ್ರತಿ ಅಮವಾಸ್ಯೆಗೆ ದರ್ಬಾರು ಮಠ, ಗಚ್ಚಿನ ಮಠ ಮತ್ತು ಮರಿ ಕೊಟ್ಟೂರೇಶ್ವರ ಮಠದಲ್ಲಿ ಸ್ಥಳೀಯ ಭಕ್ತರು ಹಲವು ವರ್ಷಗಳಿಂದ ಪ್ರಸಾದ ವ್ಯವಸ್ಥೆ ಮಾಡುತ್ತಿದ್ದಾರೆ. ಇದನ್ನು ಬಿಟ್ಟರೆ ಹಿರೇಮಠದಲ್ಲಿ ನಿತ್ಯ ಅನ್ನ ಸಂತರ್ಪಣೆ ಇರುತ್ತದೆ. ಮಧ್ಯಾಹ್ನ 1- 3 ಗಂಟೆಯವರೆಗೆ ಹಾಗೂ ರಾತ್ರಿ 9.30- 10.30ರವರೆಗೆ ಭಕ್ತರಿಗೆ ಪ್ರಸಾದ ಸೇವೆ ಇರುತ್ತದೆ. ನಿತ್ಯ ಮಧ್ಯಾಹ್ನ 1,500ರಿಂದ 2,000 ಭಕ್ತರು, ರಾತ್ರಿ 150ರಿಂದ 200 ಭಕ್ತರು, ಕಾಲೇಜು ವಿದ್ಯಾರ್ಥಿಗಳು ಪ್ರಸಾದ ಸ್ವೀಕರಿಸುತ್ತಾರೆ.

ಅಡುಗೆ ಸಮಾಚಾರ: ಶ್ರಾವಣ ಮಾಸದಲ್ಲಿ ನಿತ್ಯವೂ ನಾಲ್ಕೈದು ಸಾವಿರ ಭಕ್ತರು ಬರುತ್ತಾರೆ. ಇನ್ನುಳಿದ ದಿನಗಳಲ್ಲಿ ಮಧ್ಯಾಹ್ನ 75 ಕ್ವಿಂಟಾಲ್‌, ರಾತ್ರಿ 25 ಕ್ವಿಂಟಾಲ್‌ ಅಕ್ಕಿ, 200 ಲೀಟರ್‌ ಸಾಂಬಾರ್‌ ಸಿದ್ಧಪಡಿಸಲಾಗುತ್ತದೆ. ವಿಶೇಷ ದಿನಗಳಲ್ಲಿ 3ರಿಂದ 4 ಕ್ವಿಂಟಾಲ್‌ ಅಕ್ಕಿ, 500- 600 ಲೀಟರ್‌ ಸಾಂಬಾರ್‌ ಸಿದ್ಧಪಡಿಸಲಾಗುತ್ತದೆ. ಸಾಮಾನ್ಯ ದಿನಗಳಲ್ಲಿ 60-70 ಕೆ.ಜಿ ತರಕಾರಿ ವಿಶೇಷ ದಿನಗಳಲ್ಲಿ 2 ಕ್ವಿಂಟಾಲ್‌ವರೆಗೆ ಕಾಯಿ-ಪಲ್ಲೆ ಖರ್ಚಾಗುತ್ತೆ.
ಕ್ಯಾರೆಟ್‌, ಟೊಮೆಟೊ, ಈರುಳ್ಳಿ, ಬೀನ್ಸ್‌, ನವಿಲು ಕೋಸು, ಹೂ ಕೋಸು… ಇತ್ಯಾದಿ ಸೊಪ್ಪು ತರಕಾರಿಗಳನ್ನು ಬಳಸುತ್ತಾರೆ. ನಿತ್ಯ ಸಾಂಬಾರ್‌ಗೆ 15- 20 ತೆಂಗಿನಕಾಯಿ ಬೇಕಾಗುತ್ತೆ.

ಗೋಧಿ ಪಾಯಸಕ್ಕೆ ಬೆಲ್ಲ, ಗೋಡಂಬಿ, ಒಣ ದ್ರಾಕ್ಷಿ, ಉತ್ತುತ್ತಿ, ತುಪ್ಪ, ಶುಂಠಿ ಪೌಡರ್‌, ಏಲಕ್ಕಿ… ಬಳಸಲಾಗುತ್ತೆ. ಇಬ್ಬರು ಬಾಣಸಿಗರು ಏಳು ಜನ ಅಡುಗೆ ಸಹಾಯಕರಿದ್ದಾರೆ. 2011ರಿಂದಲೂ ಇಲ್ಲಿ ನಿತ್ಯ ಅನ್ನ ದಾಸೋಹ ನಡೆಯುತ್ತಿದ್ದು, ಹೋದ ವರ್ಷ ಅಂದಾಜು ಎರಡು ಲಕ್ಷ ಭಕ್ತರು ಇಲ್ಲಿ ಪ್ರಸಾದ ಸ್ವೀಕರಿಸಿದ್ದಾರೆ. ಭಕ್ತರು ದಾಸೋಹಕ್ಕೆ ಕೊಟ್ಟ ಕಾಣಿಕೆಯಿಂದಲೇ ಇಲ್ಲಿ ನಿತ್ಯ ದಾಸೋಹ ನಡೆಯುತ್ತಿರುವುದು. ದೇಗುಲದ ಹಿಂದೆ ಇರುವ ಬಯಲಲ್ಲಿ ಏಕಕಾಲಕ್ಕೆ 300-400 ಭಕ್ತರು ಬಫೆ ವ್ಯವಸ್ಥೆಯಲ್ಲಿ ಪ್ರಸಾದ ಸ್ವೀಕರಿಸುವಷ್ಟು ಸ್ಥಳಾವಕಾಶ ಇದೆ. ಭಕ್ತರು ಕೊಟ್ಟೂರೇಶ್ವರನಿಗೆ ಹಬ್ಬ ಹರಿದಿನಗಳಲ್ಲಿ ಹೋಳಿಗೆ, ಪಾಯಸ, ಅನ್ನ ಹಾಗೂ ಗಿಣ್ಣದ ನೈವೇದ್ಯ ಅರ್ಪಿಸುತ್ತಾರೆ. ಭಕ್ತರು ಅನ್ನ ದಾಸೋಹಕ್ಕೆ ನೀಡುವ ಧನಸಹಾಯ, ಇಲ್ಲವೇ ಅವರು ಭಕ್ತಿಪೂರ್ವಕವಾಗಿ ನೀಡುವ ತರಕಾರಿ, ಅಕ್ಕಿಯಿಂದ ದಾಸೋಹ ನಿರಂತರವಾಗಿ ಸಾಗಿದೆ.

Advertisement

ಹಿರಿಯರ ಜ್ಞಾಪಕಾರ್ಥ: ಭಾನುವಾರ, ಗುರುವಾರ, ಹುಣ್ಣಿಮೆ, ಅಮಾವಾಸ್ಯೆ, ಶ್ರಾವಣ ಮಾಸ, ಸರಕಾರಿ ರಜಾ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತದೆ. ನಿತ್ಯ ಅನ್ನ ಸಾರು, ಪಲಾವು, ರೈಸ್‌ ಬಾತ್‌, ಚಿತ್ರಾನ್ನವನ್ನು… ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಇಲ್ಲಿ ಭಕ್ತರು ಅನ್ನ ಸಂತರ್ಪಣೆ ಮಾಡಿಸಲೂ ಅವಕಾಶವಿದೆ. ಇದಕ್ಕೆ 12,000 ರೂ. ಪಾವತಿಸಬೇಕು. ಆ ಸಂದರ್ಭದಲ್ಲಿ ಗೋಧಿ ಪಾಯಸ, ಪಲ್ಯ ಅಥವಾ ಕೋಸಂಬರಿ, ಅನ್ನ ಸಾರು ಮಾಡಲಾಗುತ್ತದೆ. ಈ ರೀತಿಯಾಗಿ ವರ್ಷದಲ್ಲಿ ಏನಿಲ್ಲವೆಂದರೂ 50ರಿಂದ 60 ಭಕ್ತರು ಅನ್ನ ಸಂತರ್ಪಣೆ ಮಾಡಿಸುತ್ತಾರೆ. ಅನೇಕರು, ತಮ್ಮ ಜನ್ಮದಿನ, ಹಿರಿಯರ ಜ್ಞಾಪಕಾರ್ಥ ಭೋಜನ ನಿಧಿಗೆ ನೆರವಾಗುತ್ತಾರೆ. ಶುಚಿ ಮತ್ತು ರುಚಿಯಿಂದ ದೇಗುಲದಲ್ಲಿ ನಡೆಯುವ ಅನ್ನ ದಾಸೋಹ ಗಮನ ಸೆಳೆಯುತ್ತಿದೆ.

ಸೌದೆ ಒಲೆ ಅಡುಗೆ: ನಿತ್ಯ ಚೌಡಮ್ಮ ಮಠದ ಅಡುಗೆ ಕೋಣೆಯಲ್ಲಿ ಒಲೆ ಮೇಲೆ ಕಟ್ಟಿಗೆ ಬಳಸಿ ಅಡುಗೆ ಮಾಡಲಾಗುತ್ತೆ. ವಿಶೇಷ ದಿನಗಳಲ್ಲಿ ದೇಗುಲದ ಹಿಂಭಾಗದಲ್ಲಿ ಜಾಗದಲ್ಲಿ ಗ್ಯಾಸ್‌ ಬಳಸಿ ಅಡುಗೆ ಮಾಡಲಾಗುತ್ತದೆ.

ಸಂಖ್ಯಾ ಸೋಜಿಗ
ನಿತ್ಯ ಭೇಟಿ ನೀಡುವ ಭಕ್ತರು 2,000
ಶ್ರಾವಣ ಮಾಸದಲ್ಲಿ ಭೇಟಿ ನೀಡುವ ಭಕ್ತರು 4,000
ಅನ್ನ ದಾಸೋಹ ಶುರುವಾಗಿದ್ದು 2011
ವಿಶೇಷ ದಿನಗಳಲ್ಲಿ ಸಿದ್ಧಪಡಿಸುವ ಸಾಂಬಾರ್‌ 600 ಲೀಟರ್‌
ದಿನಕ್ಕೆ 100 ಕ್ವಿಂಟಾಲ್‌ ಅಕ್ಕಿ
ಬಳಸುವ ತರಕಾರಿ 60- 70 ಕೆ.ಜಿ
ಕಳೆದ ವರ್ಷ ಪ್ರಸಾದ ಸ್ವೀಕರಿಸಿದವರ ಸಂಖ್ಯೆ 2,00,000

ಭಕ್ಷ್ಯ ಸಮಾಚಾರ
ಅನ್ನ ಸಾರು, ಪಲಾವ್‌, ರೈಸ್‌ ಬಾತ್‌, ಚಿತ್ರಾನ್ನ, ಗೋಧಿ ಪಾಯಸ, ಪಲ್ಯ, ಕೋಸಂಬರಿ

ಊಟದ ಸಮಯ
ಮಧ್ಯಾಹ್ನ 1- 3
ರಾತ್ರಿ 9.30- 10.30

ಸ್ವಾಮಿಯವರಿಗೆ ಅಸಂಖ್ಯಾತ ಭಕ್ತರಿದ್ದಾರೆ. ಎರಡು ವರ್ಷದ ಹಿಂದೆ ರಥೋತ್ಸವ ನಡೆಯುತ್ತಿದ್ದ ಸಮಯದಲ್ಲಿ ರಥ ಮಗುಚಿ ಬಿದ್ದರೂ ಯಾವುದೇ ಸಾವು- ನೋವು ಸಂಭವಿಸಿರಲಿಲ್ಲ. ಅಂದಿನಿಂದ ಮೊದಲಿಗಿಂತ ಹೆಚ್ಚು ಜನ ಈ ಪವಾಡ ಪುರುಷನ ಸನ್ನಿಧಿಗೆ ಆಗಮಿಸಿ, ದರ್ಶನ ಪಡೆದು, ಪ್ರಸಾದ ಸೇವಿಸಿ ಪುನೀತರಾಗುತ್ತಿದ್ದಾರೆ. ಸರ್ವರ ಸಹಕಾರದಿಂದ ಅನ್ನ ಸಂತರ್ಪಣೆ ವ್ಯವಸ್ಥಿತವಾಗಿ ನಡೆಯುತ್ತಿದೆ .
-ಎಂ.ಎಂ.ಜೆ. ಸತ್ಯಪ್ರಕಾಶ್‌, ದಾಸೋಹ ಟ್ರಸ್ಟ್‌ನ ಅಧ್ಯಕ್ಷರು

* ಸ್ವರೂಪಾನಂದ ಎಂ. ಕೊಟ್ಟೂರು

Advertisement

Udayavani is now on Telegram. Click here to join our channel and stay updated with the latest news.

Next