Advertisement

ಶಾಲೆ ಜೀರ್ಣೋದ್ಧಾರಕ್ಕೆ ಅನುದಾನ ಕೇಳಿ

02:55 PM Sep 06, 2017 | |

ವಿಜಯಪುರ: ನಮ್ಮೂರ ಗುಡಿಗಳ ಜೀರ್ಣೋದ್ಧಾರಕ್ಕೆ ಅನುದಾನ ಕೇಳುವಂತೆ ಶಾಲೆಗಳ ಅಭಿವೃದ್ಧಿಗೂ ಅನುದಾನ ಕೇಳುವ ಮನೋಭಾವ ಬೆಳೆಸಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಕಿವಿಮಾತು ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನೋತ್ಸವ ಸಮಾರಂಭ ಉದ್ಘಾಟಿಸಿ ಅವರುಮಾತನಾಡಿದರು. ಅನೇಕ ಗ್ರಾಮಗಳ ಶಾಲೆಗಳು ಈಗಲೂ ಸ್ಥಳೀಯರ ನಿರ್ಲಕ್ಷದಿಂದ ದುಸ್ಥಿತಿಯಲ್ಲಿವೆ. ಇದರಿಂದ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿ ದೃಷ್ಟಿಯಿಂದ ಗ್ರಾಮದಲ್ಲಿರುವ ಜನತೆ ದೇವಾಲಯಗಳ ಜೊತೆಗೆ ಶಾಲೆಗಳ ಪುನರುಜ್ಜೀವನಕ್ಕೂ ಅನುದಾನ ಕೇಳುವಂತಾಗಬೇಕು, ಇದು ಸಹ ಅತ್ಯಂತ ಪವಿತ್ರವಾದ ಕಾರ್ಯ ಎಂದು ಅಭಿಪ್ರಾಯಪಟ್ಟರು. 

ಶಿಕ್ಷಕರು ಸದಾ ವಿದ್ಯಾರ್ಥಿಯಾಗಿರಬೇಕು, ಸದಾ ಅಧ್ಯಯನಶೀಲರಾಗಿರಬೇಕು. ಸತತ ಅಧ್ಯಯನದಿಂದ ಮಾತ್ರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಮಾಡಲು ಸಾಧ್ಯವಾಗುತ್ತದೆ. ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ, ಬಂಥನಾಳ ಶಿವಯೋಗಿಗಳು ಮನೆ-ಮನೆಗೆ ತೆರಳಿ ಜೋಳಿ ಹಿಡಿದು ಹಣ ಸಂಗ್ರಹಿಸಿ ಶಿಕ್ಷಣ ಸಂಸ್ಥೆ ಕಟ್ಟಿ ಮನಗೆಲ್ಲ ಅಕ್ಷರ ಭಿಕ್ಷೆ ನೀಡಿದ್ದಾರೆ. ಮಹಾನ್‌ ತತ್ವಜ್ಞಾನಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌, ಡಾ| ಎಪಿಜೆ ಅಬ್ದುಲ್‌ ಕಲಾಂ ಶ್ರೇಷ್ಠ ಗುರುಗಳು ಹಾಗೂ ಮಾರ್ಗದರ್ಶಕರು ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದು ಅವರಲ್ಲಿದ್ದ ಜ್ಞಾನದ ಪ್ರತಿಭೆಯಿಂದ ಎಂದು ಬಣ್ಣಿಸಿದರು. ಅರಿವೇ ಗುರು ಎಂದ ಹನ್ನೆರಡನೆಯ  ಶರಮಾನದ ಶರಣರು ಜ್ಞಾನದ ಮಹತ್ವ ಪ್ರಸಾರ ಮಾಡುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದರು. ಅನಕ್ಷರಸ್ಥರು ವಚನಗಳನ್ನು ರವಿಸುವ ಮಟ್ಟಕ್ಕೆ ಜ್ಞಾನ ಸಂಪನ್ನರಾಗಿದ್ದು, ಜಿಜ್ಞಾಸು ಪ್ರತಿಭಾವಂತರಾಗಿದ್ದರು ಎಂದು ವಿಶ್ಲೇಷಿಸಿದರು.

ಪ್ರಸಕ್ತ ಆಧುನಿಕ ತಂತ್ರಜ್ಞಾನದ ವೇಗದ ಯುಗದಲ್ಲಿ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ತಾಂತ್ರಿಕ ಜ್ಞಾನವನ್ನೂ ಪಡೆದಿರಬೇಕು. ಆಧುನಿಕ ಬೋಧನಾ ಉಪಕರಣಗಳು ಬಳಕೆಯಾಗಬೇಕು, ತಾಂತ್ರಿಕ ಯುಗಕ್ಕೆ ತಕ್ಕಂತೆ ಶಿಕ್ಷಣ ದೊರಕಬೇಕು. ಮೌಲ್ಯಯುತ, ಸಂಸ್ಕಾರಭರಿತ ಹಾಗೂ ಗುಣಮಟ್ಟದ ಶಿಕ್ಷಣ ಇಂದಿನ ವಿದ್ಯಾರ್ಥಿಗಳಿಗೆ ಅವಶ್ಯವಾಗಿದೆ. ರಾಷ್ಟ್ರದ ಅಭಿವೃದ್ಧಿ ಹಾಗೂ ಹಿತರಕ್ಷಣೆಯಲ್ಲಿ ಶಿಕ್ಷಣದ ಪಾತ್ರ ಪ್ರಮುಖವಾಗಿದೆ. ರಾಜ್ಯ ಸರ್ಕಾರ ಗುರುಚೇತನ ಎಂಬ ಯೋಜನೆ ಜಾರಿಗೊಳಿಸಿರುವುದು ಸಂತೋಷದ ಸಂಗತಿ ಎಂದು ಮೇಲ್ಮನೆ ಸದಸ್ಯ ಅರುಣ ಶಹಾಪುರ ಹೇಳಿದರು. ಯೋಗ ಚಿಕಿತ್ಸಾ ಕೇಂದ್ರದ ಪ್ರಭುದೇವ ಧರ್ಮಪೀಠದ ಡಾ| ವಿಜಯಕುಮಾರ ಮಹಾನುಭಾವಿಗಳು ಸಾನ್ನಿಧ್ಯ ವಹಿಸಿದ್ದರು. ಸಂಸದೀಯ ಕಾರ್ಯದರ್ಶಿ ಡಾ| ಎಂ.ಎಸ್‌. ಬಾಗವಾನ ಅಧ್ಯಕ್ಷತೆ ವಹಿಸಿದ್ದರು. 

ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ, ಕೃಷ್ಣಾ ಕಾಡಾ ಅಧ್ಯಕ್ಷ ಜಕ್ಕಪ್ಪ ಯಡವೆ, ಉಪ ಮೇಯರ್‌ ರಾಜೇಶ ದೇವಗಿರಿ, ವಿಡಿಎ ಅಧ್ಯಕ್ಷ ಆಜಾದ್‌ ಪಟೇಲ್‌, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ, ಜಿಪಂ ಸಿಇಒ ಎಂ.ಸುಂದರೇಶಬಾಬು, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಟಿ. ಗೌಡರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ, ಜುಬೇರ ಕೆರೂರ, ಅರ್ಜುನ ಲಮಾಣಿ ಇದ್ದರು.  ಡಿಡಿಪಿಐ ಪಿ.ಟಿ. ಬೊಂಗಾಳೆ ಸ್ವಾಗತಿಸಿದರು. ಡಯಟ್‌ ಪ್ರಾಂಶುಪಾಲ ಎಂ.ಎಂ. ಸಿಂಧೂರ “ಗುರು ಚೇತನ’ ಯೋಜನೆ ಕುರಿತು ಮಾಹಿತಿ ನೀಡಿದರು. ಅರಳಿಮಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next