Advertisement

ಬಾಷಾ-ಶಕೀನಾ: ಬೆಳ್ಳಿ ಗೆದ್ದ ಗುರು-ಶಿಷ್ಯೆ

11:47 AM Oct 09, 2018 | Team Udayavani |

ಜಕಾರ್ತ: ಏಶ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಕರ್ನಾಟಕದ ಗುರು, ಶಿಷ್ಯೆ ಪವರ್‌ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಪುರುಷರ ಪವರ್‌ಲಿಫ್ಟಿಂಗ್‌ 49 ಕೆ.ಜಿ. ವಿಭಾಗದಲ್ಲಿ ಫ‌ರ್ಮಾನ್‌ ಬಾಷಾ ಬೆಳ್ಳಿ ಪದಕ ಗೆದ್ದರು. ಇವರ ಶಿಷ್ಯೆ ಶಕೀನಾ ಖಾತುನ್‌ ಕೂಡ ಮಹಿಳಾ ಪವರ್‌ಲಿಫ್ಟಿಂಗ್‌ 50 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿ “ಬಲು ಅಪರೂಪ ನಮ್‌ ಜೋಡಿ’ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿದ್ದು ಇಲ್ಲಿಯೇ ತರಬೇತಿ ಪಡೆದಿದ್ದಾರೆ. 

Advertisement

ಕೂಟದಲ್ಲಿ ಭಾರತ ಒಟ್ಟು 3 ಚಿನ್ನ, 6 ಬೆಳ್ಳಿ ಹಾಗೂ 7 ಕಂಚು ಸೇರಿದಂತೆ 16 ಪದಕ ಗೆದ್ದು 8ನೇ ಸ್ಥಾನದಲ್ಲಿದೆ. ಒಟ್ಟಾರೆ 66 ಪದಕ ಗೆದ್ದ ಚೀನ ಅಗ್ರಸ್ಥಾನದಲ್ಲಿ ಮುನ್ನಡೆಯುತ್ತಿದೆ.

ಫ‌ರ್ಮಾನ್‌ ಬಾಷಾ ಕಮಾಲ್‌
ಫ‌ರ್ಮಾನ್‌ ಬಾಷಾ 2010ರ ಏಶ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಬೆಳ್ಳಿ ಪದಕ, 2014ರ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದೀಗ ಜಕಾರ್ತ ಏಶ್ಯನ್‌ ಗೇಮ್ಸ್‌ನಲ್ಲೂ ಬೆಳ್ಳಿ ಜಯಿಸಿದ ಫ‌ರ್ಮಾನ್‌ ಬಾಷಾ ಒಟ್ಟು 3 ಏಶ್ಯನ್‌ ಗೇಮ್ಸ್‌ ಪದಕಗಳಿಂದ ಅಲಂಕೃತಗೊಂಡರು. 1999ರಿಂದ ಅಂತಾರಾಷ್ಟ್ರೀಯ ಪ್ಯಾರಾ ಕೂಟದಲ್ಲಿ ಭಾಗವಹಿಸಲು ಆರಂಭಿಸಿದ ಬಾಷಾ ಇದುವರೆಗೆ 10ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕೂಟಗಳಲ್ಲಿ ಪದಕ ಗೆದ್ದಿದ್ದಾರೆ. ಲಂಡನ್‌ ಹಾಗೂ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲೂ ಪಾಲ್ಗೊಂಡು ಗಮನಾರ್ಹ ಪ್ರದರ್ಶನ ನೀಡಿದ್ದರು ಎನ್ನುವುದು ವಿಶೇಷ.

ಶಕೀನಾಗೆ ಮೊದಲ ಏಶ್ಯಾಡ್‌ ಪದಕ


ಶಕೀನಾ ಮೂಲತಃ ಪಶ್ಚಿಮ ಬಂಗಾಳದವರು. ಶಿರಾಜುಲ್ಲಾ ಫಾಸಿ ಹಾಗೂ ನೂರ್‌ಜಾಹ್ನ ದಂಪತಿಯ ನಾಲ್ಕು ಮಕ್ಕಳಲ್ಲಿ ಕಿರಿಯವರು. ಹುಟ್ಟು ಅಂಗವಿಕಲೆ. ಬಡತನದ ಪರಿಣಾಮ ಶಕೀನಾ ಶಿಕ್ಷಣ ಕೇವಲ 8ನೇ ತರಗತಿಗೆ ನಿಂತು ಹೋಯಿತು. ಆರಂಭದಲ್ಲಿ ಈಜು ಕಲಿತು ಅದರಲ್ಲೇ ಮುಂದುವರಿಯುವ ಕನಸು ಕಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಬಳಿಕ ಫ‌ರ್ಮಾನ್‌ ಬಾಷಾ ಅವರು ಶಕೀನಾ ಅವರನ್ನು ಗುರುತಿಸಿ ಬೆಂಗಳೂರಿಗೆ ಕರೆದುಕೊಂಡು ಬಂದರು. ಪವರ್‌ ಲಿಫ್ಟಿಂಗ್‌ನಲ್ಲಿ ತರಬೇತಿ ನೀಡಿದರು. 

ಶಕೀನಾ ಗ್ಲಾಸೊ ಪ್ಯಾರಾ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಗುರುವಿಗೆ ತಕ್ಕ ಶಿಷ್ಯೆ ಎನಿಸಿಕೊಂಡರು.
ರವಿವಾರದ ಸ್ಪರ್ಧೆಗಳಲ್ಲಿ ಭಾರತ 2 ಬೆಳ್ಳಿ ಹಾಗೂ 3 ಕಂಚಿನ ಪದಕ ಜಯಿಸಿತ್ತು. ಮಹಿಳೆಯರ ಎಸ್‌-10 ವಿಭಾಗದ 100 ಮೀ. ಬಟರ್‌ಫ್ಲೈನಲ್ಲಿ ದೇವಾಂಶಿ ಸತಿಜವನ್‌ ಬೆಳ್ಳಿ, ಪುರುಷರ 200 ಮೀ. ವೈಯಕ್ತಿಕ ಮೆಡ್ಲೆಯಲ್ಲಿ (ಎಸ್‌ಎಂ-7 ವಿಭಾಗ) ಸುಯಶ್‌ ಜಾಧವ್‌ ಕಂಚು ಗೆದ್ದರು. ಸೋಮವಾರದ ಸ್ಪರ್ಧೆಯ ಈಜು ಎಸ್‌ಎಂ7 ಪುರುಷರ 200 ಮೀ. ವೈಯಕ್ತಿಕ ಮೆಡ್ಲೆನಲ್ಲಿ ನಾರಾಯಣ್‌ ಸೂಯಾಷ್‌ ಜಾಧವ್‌ ಚಿನ್ನದ ಪದಕ ಗೆದ್ದರು.

Advertisement

ಸಂದೀಪ್‌ಚೌಧರಿಗೆ ಚಿನ್ನದ ಪದಕ
ಜಾವೆಲಿನ್‌ ತ್ರೋವರ್‌ ಸಂದೀಪ್‌ ಚೌಧರಿ ಏಶ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದರು. ಸೋಮವಾರ ನಡೆದ ಪುರುಷರ ಎಫ್42-44/61-64 ವಿಭಾಗದಲ್ಲಿ ಸಂದೀಪ್‌ 60.01 ಮೀ. ದೂರ ಎಸೆದು ಬಂಗಾರ ಗೆದ್ದರು. 3ನೇ ಪ್ರಯತ್ನದಲ್ಲಿ ಅವರಿಂದ ಈ ದೂರ ದಾಖಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next