ಹ್ಯಾಂಗ್‌ಝೂ: ಮಳೆ ಯಿಂದ ತೊಂದರೆಗೊಳಗಾದ ಏಷ್ಯನ್ ಗೇಮ್ಸ್‌ನ ವನಿತೆಯರ ಕ್ರಿಕೆಟ್ ಸ್ಪರ್ಧೆಯ ಕ್ವಾರ್ಟರ್‌ಫೈನಲ್ ಪಂದ್ಯ ಗಳು ರದ್ದುಗೊಂಡ ಕಾರಣ ಭಾರತ ಮತ್ತು ಪಾಕಿಸ್ಥಾನ ಉತ್ತಮ ಐಸಿಸಿ ರ್‍ಯಾಂಕಿಂಗ್ ಆಧಾರದಲ್ಲಿ ಸೆಮಿಫೈನಲ್ ಹಂತಕ್ಕೇರಿತು.
ಭಾರತ ಮತ್ತು ಮಲೇಷ್ಯ ವಿರುದ್ಧದ ಪಂದ್ಯವು ಮಳೆಯಿಂದ 15 ಓವರ್‌ಗಳಿಗೆ ಸೀಮಿತಗೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಶಫಾಲಿ ವರ್ಮ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ ಮತ್ತು ಸ್ಮತಿ ಮಂದನಾ ಅವರ ಉತ್ತಮ ಆಟ ದಿಂದಾಗಿ ಎರಡು ವಿಕೆಟಿಗೆ 173 ರನ್ ಪೇರಿಸಿತು.
ಡಕ್‌ವರ್ತ್ ಲೂಯಿಸ್ ನಿಯಮ ದಂತೆ ಮಲೇಷ್ಯ ಗೆಲ್ಲಲು 177 ರನ್ನುಗಳ ಗುರಿ ನೀಡಲಾಗಿತ್ತು. ಆದರೆ ಮಲೇಷ್ಯ ಎರಡು ಎಸೆತ ಎದುರಿಸಿದ ಬಳಿಕ ಸುರಿದ ಭಾರೀ ಮಳೆಯಿಂದಾಗಿ ಪಂದ್ಯವನ್ನು ಅಂತಿಮವಾಗಿ ರದ್ದು ಗೊಳಿಸಲಾಯಿತು.
ಪಾಕಿಸ್ಥಾನ ಮತ್ತು ಇಂಡೋನೇಶ್ಯ ನಡುವೆ ನಡೆಯಬೇಕಿದ್ದ ಇನ್ನೊಂದು ಕ್ವಾರ್ಟರ್‌ಫೈನಲ್ ಪಂದ್ಯ ಭಾರೀ ಮಳೆಯಿಂದಾಗಿ ಯಾವುದೇ ಎಸೆತ ಕಾಣದೇ ರದ್ದುಗೊಂಡಿತು. ಉತ್ತಮ ಐಸಿಸಿ ರ್‍ಯಾಂಕಿಂಗ್ ಆಧಾರದಲ್ಲಿ ಇದೀಗ ಭಾರತ ಮತ್ತು ಪಾಕಿಸ್ಥಾನ ಸೆಮಿಫೈನಲ್ ಹಂತಕ್ಕೇರಿದೆ.
ಬಾಂಗ್ಲಾದೇಶವು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಒಂದು ವೇಳೆ ಹಾಂಕಾಂಗ್ ತಂಡವನ್ನು ಸೋಲಿಸಿದರೆ ಸೆಮಿಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಪಾಕಿ ಸ್ಥಾನದ ಎದುರಾಳಿ ಯಾರೆಂದು ಇನ್ನಷ್ಟೇ ತಿಳಿಯಬೇಕಾಗಿದೆ.