ಹಾಂಗ್‌ಝೂ: ಏಷ್ಯನ್ ಗೇಮ್ಸ್ ವಾಲಿಬಾಲ್‌ನಲ್ಲಿ ಮೂರು ಚಿನ್ನದ ಪದಕ ಗೆದ್ದ ದಕ್ಷಿಣ ಕೊರಿಯಾವನ್ನು 3-2 ಅಂತರದಿಂದ ಮಣಿಸಿದ ಭಾರತ, ಪುರುಷರ ವಾಲಿಬಾಲ್‌ನಲ್ಲಿ ಅಚ್ಚರಿಯ ಹಾಗೂ ಅಮೋಘ ಫಲಿತಾಂಶ ದಾಖಲಿಸಿದೆ.
ಬುಧವಾರದ ತನ್ನ 2ನೇ ಪಂದ್ಯದಲ್ಲಿ ಭಾರತ 25-27, 29-27, 25-22, 20-25, 17-15 ಅಂತರದಿಂದ ದಕ್ಷಿಣ ಕೊರಿಯಾ ವನ್ನು ಕೆಡವಿತು.
ಮೊದಲ ಪಂದ್ಯದಲ್ಲಿ ಕಾಂಬೋಡಿಯಾವನ್ನು 3-0 ಅಂತರದಿಂದ ಪರಾಭವಗೊಳಿಸಿತ್ತು. ಇದರೊಂದಿಗೆ ಭಾರತ “ಸಿ’ ವಿಭಾಗದ ಅಗ್ರಸ್ಥಾನಿಯಾಯಿತು.
ಏಷ್ಯಾಡ್ ವಾಲಿಬಾಲ್‌ನಲ್ಲಿ ಒಟ್ಟು 19 ತಂಡಗಳು ಪಾಲ್ಗೊಂಡಿವೆ. ಇವುಗಳಲ್ಲಿ ಜಪಾನ್, ಚೀನ ಮತ್ತು ದಕ್ಷಿಣ ಕೊರಿಯಾವನ್ನು ವಾಲಿಬಾಲ್ ಪವರ್‌ಹೌಸ್ ಎಂದೇ ಗುರುತಿಸಲಾಗುತ್ತಿದೆ.
ಜಪಾನ್ ಅತ್ಯಧಿಕ 17 ಸಲ ಪೋಡಿಯಂ ಏರಿದ್ದು, 16 ಚಿನ್ನದ ಪದಕ ಗೆದ್ದಿದೆ. ಚೀನಕ್ಕೆ 11 ಬಂಗಾರ ಒಲಿದಿದೆ. ಕೊರಿಯಾ 5 ಸ್ವರ್ಣ ಪದಕಗಳೊಂದಿಗೆ 3ನೇ ಸ್ಥಾನದಲ್ಲಿದೆ.
1958ರಲ್ಲಿ ಮೊದಲ ಸಲ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ವಾಲಿಬಾಲ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅಂದು ಭಾರತ ತೃತೀಯ ಸ್ಥಾನಿಯಾಗಿತ್ತು.
ಭಾರತ ಈವರೆಗೆ ವಾಲಿಬಾಲ್‌ನಲ್ಲಿ 3 ಪದಕಗಳನ್ನು ಗೆದ್ದಿದೆ. 1962ರಲ್ಲಿ ಬೆಳ್ಳಿ ಗೆದ್ದದ್ದು ಅತ್ಯುತ್ತಮ ಸಾಧನೆಯಾಗಿದೆ. ಕೊನೆಯ ಸಲ ಪದಕ ಜಯಿಸಿದ್ದು 37 ವರ್ಷಗಳ ಹಿಂದೆ, 1986ರಲ್ಲಿ. ಅಂದು ಒಲಿದದ್ದು ಕಂಚಿನ ಪದಕ.