Advertisement

Asian Games ಸ್ಕ್ವಾಷ್‌: ಭಾರತ ಸೆಮಿಫೈನಲಿಗೆ; ಎರಡು ಪದಕ ಖಚಿತ

11:16 PM Sep 28, 2023 | Team Udayavani |

ಹ್ಯಾಂಗ್‌ಝೂ: ಭಾರತದ ಪುರುಷರ ಮತ್ತು ವನಿತೆಯರ ತಂಡಗಳು ಸ್ಕ್ವಾಷ್‌ ಸ್ಪರ್ಧೆಯಲ್ಲಿ ಸೆಮಿಫೈನಲ್‌ ಹಂತ ಕ್ಕೇರಿದ್ದು ಪದಕ ಗೆಲ್ಲುವುದನ್ನು ಖಚಿತ ಪಡಿಸಿವೆ.

Advertisement

ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಪುರುಷರ ತಂಡವು ನೇಪಾಲ ತಂಡವನ್ನು 3-0 ಅಂತರದಿಂದ ಉರುಳಿಸಿದರೆ ವನಿತೆ ಯರ ತಂಡ ಮಲೇಷ್ಯಾ ವಿರುದ್ಧ 0-3 ಅಂತರದಿಂದ ಸೋತಿತ್ತು. ಆದರೆ ಬಣದ ಅಗ್ರ ಎರಡು ತಂಡಗಳಾಗಿ ಭಾರತ ಮತ್ತು ಮಲೇಷ್ಯಾ ಸೆಮಿಫೈನಲಿಗೇರಿದ್ದು ಕಂಚು ಗೆಲ್ಲುವುದನ್ನು ಖಚಿತಪಡಿಸಿದೆ.

ಪುರುಷರಲ್ಲಿ ಅಭಯ್‌ ಸಿಂಗ್‌, ಮಹೇಶ್‌ ಮಂಗೋನ್ಕರ್‌ ಮತ್ತು ಹರೀಂದರ್‌ ಪಾಲ್‌ ಸಿಂಗ್‌ ಸಂಧು ಅವರು ತಮ್ಮ ಎದುರಾಳಿಯೆದುರು ಸುಲಭ ಗೆಲುವು ಸಾಧಿಸಿ ಸಂಭ್ರಮಿಸಿದರು. ಆದರೆ ವನಿತೆಯರ ಮೂರು ಪಂದ್ಯಗಳಲ್ಲಿ ಭಾರತ ಗೆಲ್ಲಲು ವಿಫ‌ಲವಾಯಿತು.

ಮೊದಲ ಪಂದ್ಯದಲ್ಲಿ ಅನುಭವಿ ಜೋಶ್ನಾ ಚಿನ್ನಪ್ಪ ಅವರು ಕೇವಲ 21 ನಿಮಿಷಗಳಲ್ಲಿ ಸುಬ್ರಹ್ಮಣಿಯಮ್‌ ಸಿವ ಸಾಂಗರಿ ಅವರಿಗೆ ಶರಣಾದರೆ ದ್ವಿತೀಯ ಪಂದ್ಯದಲ್ಲಿ ತನ್ವಿ ಖನ್ನಾ ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತೆ ಐಫಾ ಬಿಂಟಿ ಅಜ್ಮಾನ್‌ ಅವರ ವಿರುದ್ಧ ತೀವ್ರ ಸ್ಪರ್ಧೆ ನೀಡಿ ಅಂತಿಮವಾಗಿ ಸೋತು ಹೊರಬಿದ್ದರು. ಮೂರನೇ ಪಂದ್ಯ ದಲ್ಲಿ 15ರ ಹರೆಯದ ಅನಾಹತ್‌ ಸಿಂಗ್‌ ಸುಲಭವಾಗಿ ಪರಾಭವಗೊಂಡರು.

ಬ್ಯಾಡ್ಮಿಂಟನ್‌: ಭಾರತ ಕ್ವಾರ್ಟರ್‌ಫೈನಲಿಗೆ; ಮುಂದಿನ ಎದುರಾಳಿ ಥಾಯ್ಲೆಂಡ್‌

Advertisement

ಭಾರತೀಯ ವನಿತಾ ತಂಡವು ಬ್ಯಾಡ್ಮಿಂಟನ್‌ ಸ್ಪರ್ಧೆಯ ತಂಡ ವಿಭಾಗದಲ್ಲಿ ಮಂಗೋಲಿಯ ತಂಡವನ್ನು 3-0 ಅಂತರದಿಂದ ಸೋಲಿಸಿ ಕ್ವಾರ್ಟರ್‌ಫೈನಲ್‌ ಹಂತಕ್ಕೇರಿತು.

ಏಕಮುಖವಾಗಿ ಸಾಗಿದ ಈ ಹೋರಾಟದಲ್ಲಿ ಭಾರತೀಯ ಆಟಗಾರ್ತಿಯರು ಸುಲಭವಾಗಿ ಪಂದ್ಯಗಳನ್ನು ಗೆದ್ದು ಮುನ್ನಡೆದರು. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ತಂಡ ಕಠಿನ ಎದುರಾಳಿ ಥಾಯ್ಲೆಂಡ್‌ ತಂಡವನ್ನು ಎದುರಿಸಬೇಕಾಗಿದೆ. ಥಾಯ್ಲೆಂಡ್‌ ತಂಡದಲ್ಲಿ ಮಾಜಿ ವಿಶ್ವ ಚಾಂಪಿಯನ್‌ ರಚನಾಕ್‌ ಇಂತನಾನ್‌, ವಿಶ್ವದ 12ನೇ ರ್‍ಯಾಂಕಿನ ಪೋರ್ನ್ ಪಾವೀ ಚೊಚುನ್‌ವಾಂಗ್‌ ಮತ್ತು ವಿಶ್ವದ 17ನೇ ರ್‍ಯಾಂಕಿನ ಸುಪಾನಿದ ಕಟೆತಾಂಗ್‌ ಅವರಿದ್ದಾರೆ. ಹೀಗಾಗಿ ಭಾರತೀಯ ವನಿತೆಯರು ಬಹಳಷ್ಟು ಎಚ್ಚರಿಕೆಯಿಂದ ಆಡಬೇಕಾಗಿದೆ.

ಮಂಗೋಲಿಯ ವಿರುದ್ಧ ನಡೆದ ಮೊದಲ ಸಿಂಗಲ್ಸ್‌ ಪಂದ್ಯದಲ್ಲಿ ಪಿ.ವಿ. ಸಿಂಧು ಅವರು
ಗನ್‌ಬಾಟರ್‌ ಅವರನ್ನು 21-3, 21-3 ಅಂತರದಿಂದ ಸುಲಭವಾಗಿ ಮಣಿಸಿದರು. ಇನ್ನೊಂದು ಪಂದ್ಯದಲ್ಲಿ ಆಶ್ಮಿತಾ ಚಲಿಹಾ ಅವರು ಖೇರ್ಲನ್‌ ಡಾರ್ಕನ್‌ಬಾಟರ್‌ ಅವರನ್ನು 21-2, 21-3 ಗೇಮ್‌ಗಳಿಂದ ಉರುಳಿಸಿದರು.

ಮೂರನೇ ಸಿಂಗಲ್ಸ್‌ನಲ್ಲಿ ಅನುಪಮಾ ಉಪಾಧ್ಯಾಯ ಅವರು ಖುಲಾಂಗೂ ಬಾಟರ್‌ ಅವರನ್ನು 21-0, 21-2 ಗೇಮ್‌ಗಳಿಂದ ಸೋಲಿಸಿ ಮುನ್ನಡೆದರು.

Advertisement

Udayavani is now on Telegram. Click here to join our channel and stay updated with the latest news.

Next