ಹ್ಯಾಂಗ್‌ಝೂ : ಭಾರತದ ಪುರುಷರ ಹಾಗೂ ವನಿತಾ ಟೇಬಲ್ ಟೆನಿಸ್ ತಂಡಗಳು ಏಷ್ಯನ್ ಗೇಮ್ಸ್ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಈ ತಂಡಗಳು ಕ್ರಮವಾಗಿ ನೇಪಾಲ ಮತ್ತು ತಜಿಕಿಸ್ಥಾನ್ ವಿರುದ್ಧ 3-0 ಅಂತರದ ಗೆಲುವು ಸಾಧಿಸಿದವು.ಎರಡೂ ತಂಡಗಳು ತಮ್ಮ ತಮ್ಮ ವಿಭಾಗಗಳಲ್ಲಿ ಅಗ್ರಸ್ಥಾನ ಅಲಂಕರಿಸಿವೆ.
ಇಂದು ಹಾಕಿ ಅಭಿಯಾನ
ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರ ಪ್ರವೇ ಶದ ಯೋಜನೆ ಹಾಕಿಕೊಂಡಿರುವ ಭಾರತದ ಪುರುಷರ ಹಾಕಿ ತಂಡ ರವಿವಾರ ಏಷ್ಯಾಡ್ ಹಾಕಿ ಅಭಿಯಾನ ಆರಂಭಿಸಲಿದೆ. “ಎ’ ವಿಭಾಗದ ಮುಖಾಮುಖೀಯಲ್ಲಿ ಭಾರತ ತಂಡ ಉಜ್ಬೆಕಿಸ್ಥಾನವನ್ನು ಎದುರಿಸಲಿದೆ.
ವಿಶ್ವ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಭಾರತ ಕಳೆದ ಸಲ ಕಂಚಿನ ಪದಕ ಜಯಿಸಿತ್ತು. ಒಲಿಂಪಿಕ್ಸ್ ನಲ್ಲೂ ಕಂಚು ಗೆದ್ದು ಪದಕದ ಬರಗಾಲ ನೀಗಿಸಿಕೊಂಡಿತ್ತು. ಈ ಬಾರಿ ಹ್ಯಾಂಗ್‌ಝೂನಲ್ಲಿ ಚಿನ್ನದ ಕನಸು ಕಾಣುತ್ತಿದೆ. ಆದರೆ ತವರಲ್ಲೇ ನಡೆದ ವಿಶ್ವಕಪ್ ಕೂಟದಲ್ಲಿ 9ನೇ ಸ್ಥಾನಕ್ಕೆ ಕುಸಿದುದನ್ನು ಮರೆಸುವ ರೀತಿಯಲ್ಲಿ ಹೋರಾಟ ಸಂಘಟಿಸಬೇಕಿದೆ.
ಹರ್ಮನ್‌ಪ್ರೀತ್ ಸಿಂಗ್ ಸಾರಥ್ಯದ ಭಾರತ ನೂತ ಕೋಚ್ ಕ್ರೆಗ್ ಫುಲ್ಟನ್ ಮಾರ್ಗದರ್ಶನದಲ್ಲಿ ಅಮೋಘ ಪ್ರದರ್ಶನ ಕಾಯ್ದುಕೊಂಡು ಬಂದಿದೆ. ಚೆನ್ನೈಯಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕೂಟದಲ್ಲಿ ಪ್ರಶಸ್ತಿಯನ್ನೆತ್ತಿರುವುದು ಇದಕ್ಕೊಂದು ಉತ್ತಮ ನಿದರ್ಶನ.
ಭಾರತ ತನ್ನ ಉಳಿದ ಲೀಗ್ ಪಂದ್ಯಗಳನ್ನು ಸಿಂಗಾಪುರ (ಸೆ. 26), ಜಪಾನ್ (ಸೆ. 28), ಪಾಕಿಸ್ಥಾನ (ಸೆ. 30) ಮತ್ತು ಬಾಂಗ್ಲಾದೇಶ (ಅ. 2) ವಿರುದ್ಧ ಆಡಲಿದೆ.