ಹ್ಯಾಂಗ್‌ಝೂ : ಏಷ್ಯನ್ ಗೇಮ್ಸ್ ಕೂಟದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವನಿತಾ ತಂಡ ಬಾಂಗ್ಲಾದೇಶದ ವಿರುದ್ಧ 8 ವಿಕೆಟ್ ಗಳ ಸುಲಭ ಜಯ ಸಾಧಿಸಿ ಫೈನಲ್ ಹಂತಕ್ಕೇರಿದೆ.
ಏಷ್ಯನ್ ಗೇಮ್ಸ್ ಪದಕ ಗೆಲ್ಲಲು ಮಹತ್ವದ ಪಂದ್ಯವಾಗಿದ್ದ ಸೆಮಿಫೈನಲ್ ನಲ್ಲಿ ಮೊದಲು ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಭಾರತೀಯ ತಂಡ ಶ್ರೇಷ್ಠಮಟ್ಟದ ಬೌಲಿಂಗ್ ದಾಳಿಯಿಂದ ಬಾಂಗ್ಲಾ ಬ್ಯಾಟರ್ ಗಳು ತತ್ತರಿಸಿದರು.
ಬಾಂಗ್ಲಾದ ಆರಂಭಿಕ ಬ್ಯಾಟರ್ ಗಳಾದ ಶಥಿ ರಾಣಿ, ಶಮೀಮಾ ಸುಲ್ತಾನ ತಮ್ಮ ಖಾತೆ ತೆರೆಯದೆ ಔಟಾದರು. ಆರಂಭದಲ್ಲೇ ಪೂಜಾ ವಸ್ತ್ರಕರ್ ಬೌಲಿಂಗ್ ಗೆ ಬೆದರಿದ ಬ್ಯಾಟರ್ ಗಳು ಕ್ಷಣಮಾತ್ರದಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ವಿಕೆಟ್ ಒಪ್ಪಿಸಿದರು. ಬಾಂಗ್ಲಾ ಪರವಾಗಿ ಸೋಭಾನ ಮೊಸ್ತರಿ(8 ರನ್) ನಾಯಕಿ ನಿಗರ್ ಸುಲ್ತಾನ(12 ರನ್) , ನಹಿದಾ ಆಖ್ತಾರ್(9 ರನ್) ಬ್ಯಾಟರ್ ಗಳು ಹೆಚ್ಚು ರನ್ ಗಳಿಸಿದರು. ಅದು ಬಿಟ್ಟರೆ ಉಳಿದವರು ಶೂನ್ಯ ಸುತ್ತಿದ್ದವರೇ ಹೆಚ್ಚು.
ಅಂತಿಮವಾಗಿ ಬಾಂಗ್ಲಾದೇಶ ವನಿತಾ ತಂಡ 17.5 ಓವರ್ ಗಳಲ್ಲಿ ಸರ್ವಪತನವಾಗಿ 51 ರನ್ ಗಳಿಸಿ,52 ರನ್ ಗಳ ಸುಲಭ ಗುರಿಯನ್ನು ಭಾರತಕ್ಕೆ ನೀಡಿತು.
ಸಣ್ಣ ಮೊತ್ತವನ್ನು ಚೇಸ್ ಮಾಡಲು ಕ್ರಿಸ್ ಗಳಿದ ಭಾರತೀಯ ಆಟಗಾರರಲ್ಲಿ ಆರಂಭದಲ್ಲಿ ನಾಯಕಿ ಸ್ಮೃತಿ ಮಂಧಾನ 7 ರನ್ ಗಳಿಸಿ ಔಟಾದರು. ಆದರೆ ಆ ಬಳಿಕ ಶಫಾಲಿ ವರ್ಮಾ ಹಾಗೂ ಜೆಮಿಮಾ ರೋಡ್ರಿಗಸ್ ಅವರ ಜೊತೆಯಾಟ ಸುಲಭವಾಗಿ ಭಾರತ ಫೈನಲ್ ಹಾದಿಯನ್ನು ತಲುಪುವಂತೆ ಮಾಡಿತು.
ಶಫಾಲಿ 17 ಬಾರಿಸಿ ಗೆಲುವಿನ ಅಂಚಿನಲ್ಲಿ ಔಟಾದರೆ, ಜೆಮಿಮಾ ರೋಡ್ರಿಗಸ್ 20 ರನ್ ಗಳಿಸಿ ಔಟಾಗದೆ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು. ಭಾರತ 8.2 ಓವರ್ ಗಳಲ್ಲಿ ಪಂದ್ಯವನ್ನು ಗೆದ್ದು ಏಷ್ಯನ್ ಗೇಮ್ಸ್ ನ ಫೈನಲ್ ಗೆ ತಲುಪಿದೆ.
ಭಾರತದ ಪರವಾಗಿ ಪೂಜಾ ವಸ್ತ್ರಕರ್ ಅವರು 4 ವಿಕೆಟ್ ಪಡೆದು ಮಿಂಚಿದರೆ, ಟಿಟಾಸ್ ಸಾಧು, ಅಮನ್ಜೋತ್ ಕೌರ್, ರಾಜೇಶ್ವರಿ ಗಾಯಕವಾಡ್, ದೇವಿಕಾ ವೈದ್ಯ ಗತಲಾ 1 ವಿಕೆಟ್ ಪಡೆದರು.