Advertisement
ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ಣೀತ್ ಕೌರ್ ಅವರನ್ನು ಒಳಗೊಂಡ ವನಿತೆಯ ಕಾಂಪೌಂಡ್ ತಂಡವು ಕೇವಲ ಒಂದಂಕದಲ್ಲಿ ಚೈನೀಸ್ ತೈಪೆ ತಂಡವನ್ನು ಸೋಲಿಸಿ ಚಿನ್ನ ಗೆದ್ದು ಸಂಭ್ರಮಿಸಿತು. ಅಂತಿಮ ಸುತ್ತಿನಲ್ಲಿ 60ರಲ್ಲಿ 60 ಅಂಕ ಗಳಿಸುವ ಮೂಲಕ ಭಾರತ ಅದ್ಭುತ ಸಾಧನೆಗೈದಿತು.
ಅಭಿಷೇಕ್ ವರ್ಮ, ಓಜಸ್ ದೇವತಾಲೆ ಮತ್ತು ಪ್ರಥಮೇಶ್ ಜಾಕರ್ ಅವರನ್ನು ಒಳಗೊಂಡ ಪುರುಷರ ಕಾಂಪೌಂಡ್ ತಂಡವು ಫೈನಲ್‌ನಲ್ಲಿ ದಕ್ಷಿಣ ಕೊರಿಯವನ್ನು 235-230 ಅಂಕಗಳಿಂದ ಸೋಲಿಸಿ ಚಿನ್ನದ ಪದಕ ಜಯಿಸಿತ್ತು. ಭಾರತ ತಂಡ ಬುಧವಾರ ನಡೆದ ಮಿಕ್ಸೆಡ್ ತಂಡ ಸ್ಪರ್ಧೆಯಲ್ಲೂ ಚಿನ್ನ ಜಯಿಸಿತ್ತು. ಈ ಮೂಲಕ ತಂಡ ವಿಭಾಗದ ಮೂರು ಚಿನ್ನ ಭಾರತಕ್ಕೆ ಒಲಿಯಿತು.
ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಅಭಿಷೇಕ್ ವರ್ಮ ಮತ್ತು ಓಜಸ್ ದೇವತಾಲೆ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಭಾರತ ಆರ್ಚರಿಯಲ್ಲಿ ಆರು ಪದಕ ಗೆಲ್ಲುವುದು ಖಚಿತವಾಗಿದೆ. ಇದು ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಶ್ರೇಷ್ಠ ನಿರ್ವಹಣೆ ಆಗಿದೆ. 2014ರ ಗೇಮ್ಸ್‌ನಲ್ಲಿ ಭಾರತ ತಲಾ ಒಂದು ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದಿರುವುದು ಭಾರತದ ಈ ಹಿಂದಿನ ಶ್ರೇಷ್ಠ ನಿರ್ವಹಣೆಯಾಗಿತ್ತು.
Related Articles
ಮಿಕ್ಸೆಡ್ ಮತ್ತು ವನಿತೆಯರ ತಂಡ ವಿಭಾಗದಲ್ಲಿ ಚಿನ್ನ ಗೆದ್ದ ಜ್ಯೋತಿ ಸುರೇಖಾ ವೆನ್ನಮ್ ಸಿಂಗಲ್ಸ್ ಫೈನಲ್‌ನಲ್ಲೂ ಸ್ಪರ್ಧಿಸಲಿದ್ದು ಹ್ಯಾಟ್ರಿಕ್ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 27ರ ಹರೆಯದ ಜ್ಯೋತಿ ಶನಿವಾರ ನಡೆಯುವ ವೈಯಕ್ತಿಕ ಫೈನಲ್‌ನಲ್ಲಿ ದಕ್ಷಿಣ ಕೊರಿಯದ ಸೊ ಚೇವೋನ್ ಅವರ ಸವಾಲನ್ನು ಎದುರಿಸಲಿದ್ದಾರೆ.
Advertisement
ಭಾರತ ಇದುವರೆಗೆ ಗೆದ್ದಿರುವ ಪದಕಗಳು: ಚಿನ್ನ- 21; ಬೆಳ್ಳಿ – 32; ಕಂಚು -33, ಒಟ್ಟು 86
ಸ್ಕ್ವಾಷ್: ಸಿಂಗಲ್ಸ್‌ನಲ್ಲಿ ಸೌರವ್ ಘೋಷಲ್‌ಗೆ ಬೆಳ್ಳಿ, ಮಿಕ್ಸೆಡ್ ಡಬಲ್ಸ್‌ನಲ್ಲಿ ಭಾರತಕ್ಕೆ ಚಿನ್ನ
ಅನುಭವಿ ದೀಪಿಕಾ ಪಳ್ಳಿಕಲ್ ಮತ್ತು ಹರೀಂದರ್ ಪಾಲ್ ಸಿಂಗ್ ಸಂಧು ಅವರು ಕೆಲವೊಂದು ಆತಂಕದ ಕ್ಷಣಗಳನ್ನು ಎದುರಿಸಿದರೂ ಸ್ಕ್ವಾಷ್ ಸ್ಪರ್ಧೆಯ ಮಿಕ್ಸೆಡ್ ಡಬಲ್ಸ್ ವಿಭಾಗದ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಿಂಗಲ್ಸ್ ಫೈನಲ್‌ನಲ್ಲಿ ಸೌರವ್ ಘೋಷಲ್ ಅವರು ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.
ದೀಪಿಕಾ-ಹರೀಂದರ್ ಅವರು 35 ನಿಮಿಷಗಳ ಕಠಿನ ಹೋರಾಟದಲ್ಲಿ ಮಲೇಷ್ಯದ ಐಫಾ ಬಿಂಟಿ ಅಜ್ಮಾನ್ ಮತ್ತು ಮೊಹಮ್ಮದ್ ಸಿಯಾಫಿಕ್ ಬಿನ್ ಕಮಾಲ್ ಅವರನ್ನು 11-10, 11-10 ಅಂಕಗಳಿಂದ ಉರುಳಿಸಿ ಚಿನ್ನ ಗೆದ್ದರು. ಇದು ಸ್ಕ್ವಾಷ್‌ನಲ್ಲಿ ಭಾರತಕ್ಕೆ ಲಭಿಸಿದ ಎರಡನೇ ಚಿನ್ನವಾಗಿದೆ.
ಭಾರತದ ಅಗ್ರ ಆಟಗಾರ ಸೌರವ್ ಘೋಷಲ್ ಫೈನಲ್‌ನಲ್ಲಿ ಮಲೇಷ್ಯದ ಇಯೈನ್ ಯೊ ಎನ್‌ಜಿ ಅವರೆದುರು ನಾಲ್ಕು ಗೇಮ್‌ಗಳ ಕಠಿನ ಹೋರಾಟದಲ್ಲಿ ಸೋತು ನಿರಾಶೆಗೊಳಿಸಿದರು. ಸೋತ ಸೌರವ್ ಬೆಳ್ಳಿ ಪಡೆದರು. ಮಿಕ್ಸೆಡ್ ಡಬಲ್ಸ್‌ನಲ್ಲಿ ಭಾರತದ ಅಭಯ್ ಸಿಂಗ್ ಮತ್ತು ಅನಾಹತ್ ಸಿಂಗ್ ಅವರು ಕಂಚಿನ ಪದಕ ಪಡೆದಿದ್ದಾರೆ. ಆದರೂ ಸ್ಕ್ವಾಷ್‌ನಲ್ಲಿ ಭಾರತ ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕದೊಂದಿಗೆ ಶ್ರೇಷ್ಠ ನಿರ್ವಹಣೆ ದಾಖಲಿಸಿ ಸಂಭ್ರಮಿಸಿದೆ. 2014ರ ಗೇಮ್ಸ್‌ನಲ್ಲಿ ಭಾರತ ಐತಿಹಾಸಿಕ ಚಿನ್ನ ಸಹಿತ ಎರಡು ಬೆಳ್ಳಿ ಮತ್ತು ಒಂದು ಕಂಚು ಗೆದ್ದಿತ್ತು.
ವನಿತಾ ಹಾಕಿ: ಭಾರತಕ್ಕೆ ಆಘಾತ ಸೆಮಿಫೈನಲ್‌ನಲ್ಲಿ ಚೀನ ವಿರುದ್ಧ ಸೋಲು
ಚಿನ್ನ ಗೆಲ್ಲುವ ಫೇವರಿಟ್ ಭಾರತ ತಂಡವು ವನಿತೆಯರ ಹಾಕಿ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಚೀನ ವಿರುದ್ಧ 0-4 ಗೋಲುಗಳಿಂದ ಸೋಲನ್ನು ಕಂಡು ಆಘಾತ ಅನುಭವಿಸಿತು. ಈ ಸೋಲಿನಿಂದ ಭಾರತ ಚಿನ್ನ ಗೆಲ್ಲುವ ಅವಕಾಶದಿಂದ ವಂಚಿತವಾಯಿತಲ್ಲದೇ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರ ಪ್ರವೇಶ ಪಡೆಯಲು ವಿಫಲವಾಯಿತು.
ಕಳೆದ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಭಾರತೀಯ ವನಿತಾ ತಂಡವು ಕಣದಲ್ಲಿರುವ ಗರಿಷ್ಠ ರ್‍ಯಾಂಕಿನ ತಂಡವಾಗಿತ್ತು. ಚೀನಕ್ಕೆ ಹೋಲಿಸಿದರೆ ಭಾರತ ಬಲಿಷ್ಠವಾಗಿತ್ತು. ಆದರೆ ತಂಡದ ಯಾವುದೇ ಆಟಗಾರ್ತಿಯರು ನಿರೀಕ್ಷಿತ ನಿರ್ವಹಣೆ ನೀಡಲು ವಿಫಲರಾಗಿ ನಿರಾಶೆಗೊಳಿಸಿದರು. ಚೀನ ಕಳೆದ ಗೇಮ್ಸ್‌ನಲ್ಲಿ ಕಂಚು ಪಡೆದಿತ್ತು. ಭಾರತ ಇನ್ನು ಕಂಚಿನ ಪದಕಕ್ಕಾಗಿ ಹೋರಾಡ ಬೇಕಾಗಿದೆ. ಶನಿವಾರ ನಡೆಯುವ ಈ ಪಂದ್ಯದಲ್ಲಿ ಭಾರತವು ಜಪಾನ್ ಮತ್ತು ದಕ್ಷಿಣ ಕೊರಿಯ ನಡುವಣ ಇನ್ನೊಂದು ಸೆಮಿಫೈನಲ್ ಪಂದ್ಯದ ಸೋತ ತಂಡವನ್ನು ಎದುರಿಸಲಿದೆ.