ಹ್ಯಾಂಗ್‌ಝೂ: ಏಷ್ಯನ್ ಗೇಮ್ಸ್ ನಲ್ಲಿ ನೇಪಾಳ ತಂಡದ ಯುವ ಬ್ಯಾಟರ್ ಗಳು ಒಂದೇ ಪಂದ್ಯದಲ್ಲಿ 3 ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ನೇಪಾಳ ಹಾಗೂ ಮಂಗೋಲಿಯಾ ನಡೆದ ಪಂದ್ಯ ಹಲವು ಕ್ರಿಕೆಟ್ ದಾಖಲೆಗಳನ್ನು ಉಡೀಸ್ ಆಗಿದೆ. ಟಿ-20 ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿ ಕ್ರಿಕೆಟ್ ಲೋಕದ ದಾಖಲೆಯನ್ನು ಬ್ರೇಕ್ ಮಾಡಿದೆ. ನೇಪಾಳ ಬ್ಯಾಟರ್ ಗಳನ್ನು ಮೂರು ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಮಂಗೋಲಿಯಾ ನೇಪಾಳದ ಬ್ಯಾಟರ್ ಗಳ ಅಬ್ಬರಕ್ಕೆ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. 19 ವರ್ಷದ ಎಡಗೈ ಬ್ಯಾಟ್ಸ್ ಮನ್ ಕುಶಾಲ್ ಮಲ್ಲ ಕೇವಲ 34 ಎಸೆತಗಳಲ್ಲಿ ಶತಕವನ್ನು ಸಿಡಿಸುವ ಮೂಲಕ ಡೇವಿಡ್ ಮಿಲ್ಲರ್, ರೋಹಿತ್ ಶರ್ಮಾ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು, ಹೊಸ ವಿಶ್ವದಾಖಲೆಯನ್ನು ಬರೆದಿದ್ದಾರೆ. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದ ಮಲ್ಲ 12 ಸಿಕ್ಸರ್ , 8 ಬೌಂಡರಿಗಳನ್ನು ಸಿಡಿಸಿದ್ದು, 137 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.
ಇನ್ನು 5ನೇ ಕ್ರಮಾಂಕದಲ್ಲಿ ಕ್ರಿಸ್ ಗಿಳಿದ ದೀಪೇಂದ್ರ ಸಿಂಗ್ ಐರೆ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಕೇವಲ 9 ಎಸೆತಗಳಲ್ಲಿ ಅರ್ಧ ಶತಕವನ್ನು ಸಿಡಿಸಿದ್ದಾರೆ. ಯುವರಾಜ್ ಸಿಂಗ್ ಅವರು ಇಂಗ್ಲೆಂಡ್ ವಿರುದ್ಧ 2007 ರ ವಿಶ್ವಕಪ್ ನಲ್ಲಿ 12 ಎಸೆತಗಳಲ್ಲಿ ಅರ್ಧ ಶತಕವನ್ನು ಬಾರಿಸಿದ್ದರು.
ಈ ದಾಖಲೆ ಮಾತ್ರವಲ್ಲದೆ ಟಿ-20ಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೂಡ ನೇಪಾಳ ಮಾಡಿದೆ. 3 ವಿಕೆಟ್ ಕಳೆದುಕೊಂಡು 314 ರನ್ ಗಳಿಸುವ ಮೂಲಕ ವಿಶ್ವ ದಾಖಲೆಯನ್ನು ಬರೆದಿದೆ.
ಈ ಹಿಂದೆ ಅಫ್ಘಾನಿಸ್ತಾನ, ಫೆಬ್ರವರಿ 23, 2019 ರಂದು ಐರ್ಲೆಂಡ್ ವಿರುದ್ಧ 3 ವಿಕೆಟ್‌ಗೆ 278 ರನ್ ಗಳಿಸಿತ್ತು.