ಮಸ್ಕತ್: ಏಶ್ಯನ್ ಚಾಂಪಿಯನ್ ಟ್ರೋಫಿ ಹಾಕಿ ರೌಂಡ್ ರಾಬಿನ್ ಲೀಗ್ ಸುತ್ತಿನಲ್ಲಿ ಭಾರತ ಏಶ್ಯಾಡ್ ಚಾಂಪಿಯನ್ ಜಪಾನ್ ವಿರುದ್ಧ ಜಬರ್ದಸ್ತ್ ಪ್ರದರ್ಶನ ನೀಡಿ 9-0 ಗೋಲುಗಳ ಜಯ ದಾಖಲಿಸಿದೆ. ಇದು ಕೂಟದಲ್ಲಿ ಭಾರತಕ್ಕೊಲಿದ ಹ್ಯಾಟ್ರಿಕ್ ಗೆಲುವಾಗಿದೆ. ರವಿವಾರ ರಾತ್ರಿ ನಡೆದ ಪಂದ್ಯದಲ್ಲಿ ಪ್ರಾಬಲ್ಯ ಮೆರೆದ ಭಾರತ, ಎದುರಾಳಿ ಜಪಾನ್‌ಗೆ ತಲೆ ಎತ್ತಲಾಗದಂತೆ ಮಾಡಿ ಏಶ್ಯಾಡ್‌ನಲ್ಲಿ ನೀಡಿದ ಕಳಪೆ ಪ್ರದರ್ಶನವನ್ನು ಮರೆ ಮಾಚಿದೆ. ಭಾರತವೀಗ 6 ತಂಡಗಳ ಗುಂಪಿನಲ್ಲಿ 9 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮಲೇಶ್ಯ 6 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಏಶ್ಯನ್ ಗೇಮ್ಸ್‌ನ ಗುಂಪು ಹಂತದ ಪಂದ್ಯ ದಲ್ಲೂ ಭಾರತ ಜಪಾನ್ ವಿರುದ್ಧ 8-0 ಗೋಲು ಗಳಿಂದ ಗೆಲುವು ದಾಖಲಿಸಿತ್ತು.
ಸತತ ಆಕ್ರಮಣ
ವಿಶ್ವದ 5ನೇ ಶ್ರೇಯಾಂಕಿತ ಭಾರತ ಏಶ್ಯನ್ ಗೇಮ್ಸ್ ಚಾಂಪಿಯನ್‌ಗೆ ಒಂದೇ ಒಂದು ಗೋಲು ಹೊಡೆಯುವ ಅವಕಾಶ ನೀಡಲಿಲ್ಲ. ಭಾರತದ ಪರಮನ್‌ದೀಪ್ ಸಿಂಗ್ 3 ಗೋಲು (4ನೇ ನಿಮಿಷ, 49ನೇ ನಿಮಿಷ, 57ನೇ ನಿಮಿ ಷ), ಹರ್ಮನ್ ಪ್ರೀತ್ ಸಿಂಗ್ 2 ಗೋಲು (17ನೇ ನಿಮಿಷ, 21ನೇ ನಿಮಿಷ), ಗುರ್ಜಂತ್ ಸಿಂಗ್, ಆಕಾಶ್‌ದೀಪ್ ಸಿಂಗ್, ಸುಮೀತ್, ಲಲಿತ್ ಉಪಾಧ್ಯಾಯ ತಲಾ ಒಂದು ಗೋಲು ಹೊಡೆದು ಗೆಲುವಿನ ರೂವಾರಿಗಳಾದರು.
ಪಾಕಿಸ್ಥಾನ ವಿರುದ್ಧ ಗೆಲುವಿನ ಬಳಿಕ ಆತ್ಮವಿಶ್ವಾಸದಲ್ಲಿದ್ದ ಭಾರತ ತಂಡ ಉತ್ತಮ ಆರಂಭವನ್ನೇ ಪಡೆಯಿತು. 4ನೇ ನಿಮಿಷದಲ್ಲೇ ಮನ್‌ದೀಪ್ ಸಿಂಗ್ ಮೊದಲ ಗೋಲು ಹೊಡೆದು ಮುನ್ನಡೆ ತಂದು ಕೊಟ್ಟರು. ಅನಂತರ ಭಾರತ ಹಿಂದಿರುಗಿ ನೋಡಲೇ ಇಲ್ಲ. ಮೊದಲಾರ್ಧ ಜಪಾನ್‌ಗೆ ಸಾಕಷ್ಟು ಕಠಿನವಾಗಿ ಪರಿಣಮಿಸಿತು. ಭಾರತ ಮೊದಲ ಕ್ವಾರ್ಟರ್‌ನಲ್ಲಿ 2-0 ಮುನ್ನಡೆ ಕಾಯ್ದುಕೊಂಡಿತು. ದ್ವಿತೀಯ ಕ್ವಾರ್ಟರ್‌ನಲ್ಲಿ ಮತ್ತೆರಡು ಗೋಲು ಸಿಡಿಸಿತು.
ಮಂಕಾದ ಜಪಾನ್
ದ್ವಿತೀಯಾರ್ಧದಲ್ಲಿ ಜಪಾನ್ ಆತ್ಮವಿಶ್ವಾಸದಿಂದಲೇ ಕಣಕ್ಕಿಳಿದರೂ ಭಾರತೀಯರ ಆಟದ ಎದುರು ಮಂಕಾಯಿತು. ಪ್ರಾರಂಭದಲ್ಲೇ ಆಕಾಶ್ ದೀಪ್ ಸಿಂಗ್ 5ನೇ ಗೋಲು ಬಾರಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ಭಾರತ 10 ಆಟಗಾರರೊಂದಿಗೆ ಆಡಬೇಕಾಯಿತು. ಜಪಾನ್ ಆಟಗಾರನನ್ನು ತಳ್ಳಿದ ಕಾರಣ ದಿಲ್‌ಪ್ರೀತ್ ಸಿಂಗ್ ಹೊರನಡೆದರು. ಆದರೂ ಆಕ್ರಮಣಕಾರಿ ಆಟವಾಡಿದ ಸುಮೀತ್, ಲಲಿತ್ ಒಂದೊಂದು ಗೋಲು ಹೊಡೆದು ಮುನ್ನಡೆ ತಂದಿಟ್ಟರು.