Advertisement

ಏಶ್ಯ ಕಪ್‌ ಹಾಕಿ: ಭಾರತ ಅಜೇಯ

01:25 PM Oct 16, 2017 | Team Udayavani |

ಢಾಕಾ: ರವಿವಾರದ ಲೀಗ್‌ ಹಣಾಹಣಿಯಲ್ಲಿ ಬದ್ಧ ಎದುರಾಳಿ ಪಾಕಿಸ್ಥಾನವನ್ನು 3-1 ಗೋಲುಗಳಿಂದ ಹೊಡೆದುರುಳಿಸಿದ ಭಾರತ “ಏಶ್ಯ ಕಪ್‌’ ಹಾಕಿ ಪಂದ್ಯಾವಳಿಯಲ್ಲಿ ಅಜೇಯವಾಗಿ “ಸೂಪರ್‌-4′ ಹಂತಕ್ಕೆ ಲಗ್ಗೆ ಹಾಕಿದೆ. “ಎ’ ವಿಭಾಗದಲ್ಲಿ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿದ ಮನ್‌ಪ್ರೀತ್‌ ಸಿಂಗ್‌ ಪಡೆ ಒಟ್ಟು 9 ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡಿತು.

Advertisement

ಪಾಕಿಸ್ಥಾನ ಮತ್ತು ಜಪಾನ್‌ ತಲಾ ಒಂದು ಜಯ, ಒಂದು ಡ್ರಾ ಹಾಗೂ ಒಂದು ಸೋಲಿನೊಂದಿಗೆ 4 ಅಂಕ ಸಂಪಾದಿಸಿದರೂ ಗೋಲು ಗಳಿಕೆಯಲ್ಲಿ ಮುಂದಿದ್ದ ಪಾಕಿಸ್ಥಾನ ಮುಂದಿನ ಸುತ್ತು ಪ್ರವೇಶಿಸಿತು. “ಎ’ ವಿಭಾಗದ ಇನ್ನೊಂದು ಪಂದ್ಯದಲ್ಲಿ ಜಪಾನ್‌ 3-1 ಅಂತರದಿಂದ ಬಾಂಗ್ಲಾದೇಶವನ್ನು ಪರಾಭವಗೊಳಿಸಿತು. 

ಚಿಂಗ್ಲೆನ್ಸಾನ ಸಿಂಗ್‌ (17ನೇ ನಿಮಿಷ), ರಮಣ್‌ದೀಪ್‌ ಸಿಂಗ್‌ (44ನೇ ನಿಮಿಷ) ಮತ್ತು ಹರ್ಮನ್‌ಪ್ರೀತ ಸಿಂಗ್‌ (45ನೇ ನಿಮಿಷ) ಭಾರತದ ಗೋಲುವೀರರು. ಇವರ ಸಾಹಸದಿಂದ ಭಾರತ 3ನೇ ಕ್ವಾರ್ಟರ್‌ ಮುಗಿಯುವಾಗ 3-0 ಮುನ್ನಡೆಯೊಂದಿಗೆ ದಾಪುಗಾಲಿಕ್ಕಿತ್ತು. ಪಾಕಿಸ್ಥಾನದ ಏಕೈಕ ಗೋಲು 49ನೇ ನಿಮಿಷದಲ್ಲಿ ಅಲಿ ಶಾನ್‌ ಅವರಿಂದ ದಾಖಲಾಯಿತು. ಇದಕ್ಕೂ ಮುನ್ನ ಭಾರತ ಜಪಾನನ್ನು 5-1 ಗೋಲುಗಳಿಂದ, ಆತಿಥೇಯ ಬಾಂಗ್ಲಾದೇಶವನ್ನು 7-0 ಗೋಲುಗಳಿಂದ ಮಣಿಸಿತ್ತು.

ಮೇಲುಗೈ ಸಾಧಿಸಿದ ಭಾರತ
ಮೊದಲ ಕ್ವಾರ್ಟರ್‌ನಲ್ಲಿ ಭಾರತ-ಪಾಕಿಸ್ಥಾನ ಗಳೆರಡೂ ಆಕ್ರಮಣದ ಜತೆಗೆ ರಕ್ಷಣಾತ್ಮಕ ಆಟಕ್ಕೆ ಹೆಚ್ಚಿನ ಒತ್ತು ಕೊಟ್ಟವು. ಈ ಅವಧಿಯ ಕೊನೆಯ ಕ್ಷಣದಲ್ಲಿ ಪಾಕ್‌ ಪೆನಾಲ್ಟಿ ಕಾರ್ನರ್‌ ಒಂದನ್ನು ಪಡೆಯಿತಾದರೂ ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫ‌ಲವಾಯಿತು. 

ದ್ವಿತೀಯ ಕ್ವಾರ್ಟರ್‌ನ ಆರಂಭದಲ್ಲೇ ಭಾರತ ಗೋಲಿನ ಖಾತೆ ತೆರೆದು ಮೇಲುಗೈ ಸಾಧಿಸಿತು. ಆಕಾಶ್‌ದೀಪ್‌ ಸಿಂಗ್‌ ಅವರಿಂದ ಅಮೋಘ ಪಾಸ್‌ ಒಂದನ್ನು ಪಡೆದ ಚಿಂಗ್ಲೆನ್ಸಾನ ಸಿಂಗ್‌ ಅದ್ಬುತ ಗೋಲೊಂದನ್ನು ಸಿಡಿಸಿದರು. ಎರಡೇ ನಿಮಿಷದಲ್ಲಿ ಗುರ್ಜಂತ್‌ ಸಿಂಗ್‌ ಮುಂದೆ ಗೋಲಿನ ಅವಕಾಶ ತೆರೆಯಿತಾದರೂ ಇದರಲ್ಲಿ ಅವರು ಯಶಸ್ಸು ಕಾಣಲಿಲ್ಲ. ಬಳಿಕ ಪಾಕಿಸ್ಥಾನಕ್ಕೆ ಮತ್ತೂಂದು ಪೆನಾಲ್ಟಿ ಕಾರ್ನರ್‌ ಅವಕಾಶ ಸಿಕ್ಕಿತು. ಮೊಹಮ್ಮದ್‌ ಅಟ್ಟಿಕ್‌ ಹೊಡೆತವನ್ನು ಯುವ ಗೋಲ್‌ಕೀಪರ್‌ ಸೂರಜ್‌ ಕರ್ಕೇರ ಅಮೋಘ ರೀತಿಯಲ್ಲಿ ತಡೆದರು. 

Advertisement

ಪಂದ್ಯದ ಅರ್ಧ ಅವಧಿಯ ಬಳಿಕ ಭಾರತ ತನ್ನ ಗೋಲಿಯನ್ನು ಬದಲಿಸಿತು. ಕರ್ಕೇರ ಸ್ಥಾನದಲ್ಲಿ ಆಕಾಶ್‌ ಚಿಕ್ತೆ ಬಂದರು. 40ನೇ ನಿಮಿಷದಲ್ಲಿ ಇವರಿಂದಲೂ “ಸೂಪರ್ಬ್ ಸೇವ್‌’ ಪ್ರದರ್ಶನ ಕಂಡುಬಂತು. ಅನಂತರವೇ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿದ್ದು. ಆದರೆ ಇದನ್ನು ವರುಣ್‌ ಕುಮಾರ್‌ ವಿಫ‌ಲಗೊಳಿಸಿದರು. ಬಳಿಕ ಪಾಕಿಸ್ಥಾನದ 3ನೇ ಪೆನಾಲ್ಟಿ ಕಾರ್ನರ್‌ ಕೂಡ ವಿಫ‌ಲಗೊಂಡಿತು.

2 ನಿಮಿಷ, 2 ಗೋಲು!
ಮುಂದಿನ ಎರಡೇ ನಿಮಿಷಗಳಲ್ಲಿ ಭಾರತದ ಮುನ್ನಡೆ 3-0ಗೆ ವಿಸ್ತರಿಸಲ್ಪಟ್ಟಿತು. 44ನೇ ನಿಮಿಷದಲ್ಲಿ ರಮಣ್‌ದೀಪ್‌ ಸಿಂಗ್‌, ಮುಂದಿನ ನಿಮಿಷದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಪಾಕಿಗೆ ಆಘಾತವಿಕ್ಕಿದರು. ಭಾರತದ ಗೆಲುವು ಖಾತ್ರಿಯಾಯಿತು. ಭಾರತಕ್ಕೆ ದಕ್ಕಿದ 2ನೇ ಪೆನಾಲ್ಟಿ ಕಾರ್ನರನ್ನು ಹರ್ಮನ್‌ಪ್ರೀತ್‌ ಗೋಲು ಪೆಟ್ಟಿಗೆಗೆ ತಳ್ಳುವಲ್ಲಿ ಯಶಸ್ವಿಯಾದರು. 

3 ಗೋಲುಗಳ ಹಿನ್ನಡೆಗೆ ಸಿಲುಕಿದ ಪಾಕಿಸ್ಥಾನ 4ನೇ ಕ್ವಾರ್ಟರ್‌ನಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಲೇಬೇಕಾದ ಒತ್ತಡಕ್ಕೆ ಸಿಲುಕಿದರೂ ಭಾರತದ ಪಾರಮ್ಯದ ಮುಂದೆ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಅಲಿ ಶಾನ್‌ ಗೋಲು ಖಾತೆ ತೆರೆದು ಸೋಲಿನ ಅಂತರವನ್ನು ತಗ್ಗಿಸಿದರು. ಅನಂತರದ 4ನೇ ಪೆನಾಲ್ಟಿ ಕಾರ್ನರ್‌ ಹೊಡೆತವನ್ನು ಗೋಲಿ ಆಕಾಶ್‌ ಚಿಕ್ತೆ ಯಶಸ್ವಿಯಾಗಿ ತಡೆದರು. ಅಲ್ಲಿಗೆ ಪಾಕ್‌ ಕತೆ ಮುಗಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next