ಹುಲುನ್‌ಬಿಯುರ್: ಸತತ ಎರಡು ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿರುವ ಭಾರತ ಹಾಕಿ ತಂಡವು ಇದೀಗ ಏಷ್ಯನ್ ಚಾಂಪಿಯನ್ಸ್ ಟ್ರೋಫಿ (Asian Champions Trophy) ಕಿರೀಟವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಮಂಗಳವಾರ (ಸೆ.17) ಆತಿಥೇಯ ಚೀನಾ ವಿರುದ್ದ ನಡೆದ ಫೈನಲ್ ಪಂದ್ಯದಲ್ಲಿ ಭಾರತವು 1-0 ಅಂತರದಿಂದ ಗೆದ್ದುಕೊಂಡಿದೆ.
ಇದು ಭಾರತ ಗೆದ್ದ ಐದನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಾಗಿದೆ. ಅತ್ಯಂತ ಜಿದ್ದಾಜಿದ್ದಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ಜುಗ್ರಾಜ್ ಸಿಂಗ್ ಅವರು ಗೋಲು ಬಾರಿಸಿ ಭಾರತಕ್ಕೆ ಮೇಲುಗೈ ತಂದುಕೊಟ್ಟರು.
ಭಾರತ ಮತ್ತು ಚೀನಾ ತಮ್ಮ ಟೂರ್ನಮೆಂಟ್‌ನ ಆರಂಭಿಕ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು 3-0 ಅಂತರದಲ್ಲಿ ಭಾರತವು ಗೆದ್ದುಕೊಂಡಿತ್ತು. ಕೂಟದಲ್ಲಿ ಅಜೇಯವಾಗಿದ್ದ ಹಾಲಿ ಚಾಂಪಿಯನ್ ಗಳಾದ ಹರ್ಮನ್‌ಪ್ರೀತ್ ಸಿಂಗ್ ತಂಡವು ಹಾಟ್ ಫೇವರಿಟ್ ಗಳಾಗಿ ಫೈನಲ್ ಸವಾಲಿಗೆ ಇಂದು ಇಳಿದಿತ್ತು. ಆದರೆ ಆತಿಥೇಯರು ಹೋರಾಟವಿಲ್ಲದೆ ಬಿಟ್ಟುಕೊಡಲು ಸಿದ್ಧರಿರಲಿಲ್ಲ.
ಭಾರತದ ರಕ್ಷಣಾ ವಿಭಾಗವನ್ನು ಒತ್ತಡಕ್ಕೆ ಸಿಲುಕಿಸಲು ಚೀನಾ ಪ್ರಯತ್ನಿಸುವುದರೊಂದಿಗೆ ಪಂದ್ಯ ಆರಂಭಗೊಂಡಿತ್ತು. ಎರಡೂ ತಂಡಗಳು ಜಿದ್ದಾಜಿದ್ದಿಗೆ ಬಿದ್ದಂತೆ ಆಡಿದವು. ಮೊದಲ ಮೂರು ಕ್ವಾರ್ಟರ್ ನಲ್ಲಿ ಯಾವುದೇ ತಂಡವು ಗೋಲು ಗಳಿಸಿಲು ಸಾಧ್ಯವಾಗಲಿಲ್ಲ. ಆದರೆ 51ನೇ ನಿಮಿಷದಲ್ಲಿ ಜುಗ್ರಾಜ್ ಸಿಂಗ್ ಅವರು ನಿರ್ಣಾಯಕ ಗೋಲು ಬಾರಿಸಿ ಭಾರತದ ಗೆಲುವಿಗೆ ಕಾರಣವಾದರು.