ಅಮ್ಮಾನ್ (ಜೋರ್ಡನ್): ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪ್ರಚಂಡ ಪ್ರದರ್ಶನ ನೀಡಿದೆ. ಲವ್ಲಿನಾ ಬೊರ್ಗೊಹೇನ್, ಪರ್ವೀನ್ ಹೂಡಾ, ಸವೀಟಿ ಮತ್ತು ಅಲಿಫಿಯಾ ಖಾನ್ ದೇಶಕ್ಕೆ 4 ಬಂಗಾರ ತಂದಿತ್ತಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಲವ್ಲಿನಾ ಬೊರ್ಗೊಹೇನ್ ಇದೇ ಮೊದಲ ಸಲ ಮಿಡ್ಲ್ ಹೆವಿವೇಟ್ ವಿಭಾಗದಲ್ಲಿ (75 ಕೆಜಿ) ಸ್ಪರ್ಧೆಗೆ ಇಳಿದು ದೊಡ್ಡ ಬೇಟೆಯಾಡಿದರು. ಫೈನಲ್‌ನಲ್ಲಿ ಉಜ್ಬೆಕಿಸ್ಥಾನದ ಸೋಕಿಬಾ ಅವರನ್ನು 5-0 ಅಂತರದಿಂದ ಪರಾಭವಗೊಳಿಸಿದರು.
ಲವ್ಲಿನಾ ಬೊರ್ಗೊಹೇನ್ ಪಾಲಿಗೆ ಇಂಥದೊಂದು ಬಿಗ್ ಬ್ರೇಕ್ ಅತ್ಯಗತ್ಯವಿತ್ತು. ಅವರು ತಮ್ಮ ಸ್ಪರ್ಧೆಯನ್ನು 69 ಕೆಜಿ ವಿಭಾಗದಿಂದ 75 ಕೆಜಿ ವಿಭಾಗಕ್ಕೆ ಪರಿವರ್ತಿಸಿಕೊಂಡಿದ್ದರು. ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 69 ಕೆಜಿ ವಿಭಾಗದ ಸ್ಪರ್ಧೆ ಇಲ್ಲದಿರುವುದೇ ಇದಕ್ಕೆ ಕಾರಣ.
ಪರ್ವೀನ್ ಹೂಡಾಗೆ ಶರಣಾದವರು ಜಪಾನಿನ ಕಿಟೊ ಮೈ. ಅಂತರ ಕೂಡ 5-0. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಪರ್ವೀನ್, ಕಳೆದ ಕಾಮನ್ವೆಲ್ತ್ ಗೇಮ್ಸ್ ಸ್ಪರ್ಧೆಯನ್ನು ತಪ್ಪಿಸಿಕೊಂಡಿದ್ದರು.
ಸವೀಟಿ 81 ಕೆಜಿ ಫೈನಲ್‌ನಲ್ಲಿ ಕಜಾಕ್‌ಸ್ಥಾನದ ಗುಲ್ಸಾಯಾ ಯೆರ್ಜಾನ್ ಅವರನ್ನು, ಅಲಿಫಿಯಾ ಖಾನ್ ಆತಿಥೇಯ ಜೋರ್ಡನ್‌ನ ಇಸ್ಲಾಮ್ ಹುಸೈಲಿ ವಿರುದ್ಧ ಮೇಲುಗೈ ಸಾಧಿಸಿದರು.
ಫ್ಲೈವೇಟ್ ಡಿವಿಷನ್‌ನಲ್ಲಿ ಭಾರತದ ಮತ್ತೋರ್ವ ಸ್ಪರ್ಧಿ ಮೀನಾಕ್ಷಿ ಸಿಂಗ್ (52 ಕೆಜಿ) ಬೆಳ್ಳಿಗೆ ಮುತ್ತಿಕ್ಕಿದರು. ಇದು ಅವರ ಮೊದಲ ಏಷ್ಯನ್ ಚಾಂಪಿಯನ್‌ಶಿಪ್ ಸ್ಪರ್ಧೆಯಾಗಿದೆ.