ದೋಹಾ: ದೋಹಾದಲ್ಲಿ ನಡೆ ಯುತ್ತಿರುವ ಏಶ್ಯನ್ ಆ್ಯತ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಓಟದ ತಾರೆ ಎಂ.ಆರ್. ಪೂವಮ್ಮ ಕಂಚಿನ ಪದಕ ಜಯಿಸಿ ದ್ದಾರೆ. ರವಿವಾರ ತಡರಾತ್ರಿ ನಡೆದ ವನಿತೆಯರ 400 ಮೀ. ಓಟದಲ್ಲಿ ಪೂವಮ್ಮ ತೃತೀಯ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿದರು. ಬೆಳ್ಳಿಯನ್ನು ಸ್ವಲ್ಪದರಲ್ಲೇ ಕಳೆದುಕೊಂಡರು.
ಮೊದಲ ದಿನ 5 ಪದಕ
ಕೂಟದ ಮೊದಲ ದಿನವಾದ ರವಿವಾರ ಭಾರತ 2 ಬೆಳ್ಳಿ, 3 ಕಂಚು ಸೇರಿದಂತೆ ಒಟ್ಟು 5 ಪದಕಗಳನ್ನು ಗೆದ್ದಿತು. ಅನ್ನು ರಾಣಿ ಮತ್ತು ಅವಿನಾಶ್ ಸಾಬ್ಲೆ ಬೆಳ್ಳಿ ಜಯಿಸಿದರೆ, ಎಂ.ಆರ್. ಪೂವಮ್ಮ, ಜಿ. ಮುರಳಿ ಕುಮಾರ್ ಮತ್ತು ಪಾರುಲ್ ಚೌಧರಿ ಕಂಚಿಗೆ ತೃಪ್ತಿಪಟ್ಟರು.
ವನಿತೆಯರ 400 ಮೀ. ಓಟದಲ್ಲಿ ಎಂ.ಆರ್. ಪೂವಮ್ಮ ಮೂರನೇ ಸ್ಥಾನಕ್ಕೆ ಸಮಾಧಾನ ಪಡಬೇಕಾಯಿತು. ಈ ದೂರವನ್ನು ಅವರು 53.21 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿದರು. ಬಹ್ರೈನ್‌ನ ಸಲ್ವಾ ಇದ್ ನಾಸೆರ್ ಚಿನ್ನ (51.34) ಮತ್ತು ಕಜಾಕ್‌ಸ್ಥಾನದ ಎಲಿನಾ ಮಿಖೀನಾ ಬೆಳ್ಳಿ ಗೆದ್ದರು (53.19). ಹೀಟ್ಸ್‌ನಲ್ಲಿ 52.4 ಸೆಕೆಂಡ್ ದಾಖಲಿಸಿದ ಪೂವಮ್ಮ, ಫೈನಲ್‌ನಲ್ಲಿ ಇದನ್ನು ಪುನರಾ ವರ್ತಿಸುವಲ್ಲಿ ವಿಫಲರಾದರು. “ನಾನು ಬೆಳ್ಳಿ ಪದಕದ ನಿರೀಕ್ಷೆಯಲ್ಲಿದ್ದೆ. ಆದರೆ ನನ್ನ ದೇಹ ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ’ ಎಂದು ಪೂವಮ್ಮ ಹೇಳಿದರು. ಮೊದಲ ದಿನದ ಅಂತ್ಯಕ್ಕೆ ಭಾರತ ಪದಕ ಪಟ್ಟಿಯಲ್ಲಿ 5ನೇ ಸ್ಥಾನ ಪಡೆಯಿತು. ಬಹ್ರೈನ್, ಚೀನ, ಇರಾನ್ ಮತ್ತು ಫಿಲಿಪ್ಪೀನ್ಸ್ ಮೊದಲ 4 ಸ್ಥಾನದಲ್ಲಿವೆ.
ಅವಳಿ ಚಿನ್ನ
ಸೋಮವಾರ ಭಾರತ ಅವಳಿ ಚಿನ್ನದ ಪದಕ ಜಯಿಸಿತು. ವನಿತಾ 800 ಮೀ. ಓಟವನ್ನು ಗೋಮತಿ ಮಾರಿಮುತ್ತು 2 ನಿಮಿಷ, 02.70 ಸೆಕೆಂಡ್‌ಗಳಲ್ಲಿ ಮುಗಿಸಿ ಭಾರತದ ಚಿನ್ನದ ಖಾತೆ ತೆರೆದರು. ಬಳಿಕ ಶಾಟ್‌ಪುಟರ್ ತೇಜಿಂದರ್ ಸಿಂಗ್ ತೂರ್ 20.22 ಮೀ. ದೂರದ ಸಾಧನೆಯೊಂದಿಗೆ ಬಂಗಾರ ಗೆದ್ದರು. ಪುರುಷರ ಜಾವೆಲಿನ್ ಎಸೆತದಲ್ಲಿ ಶಿವಪಾಲ್ ಸಿಂಗ್ ಅವರಿಗೆ ಬೆಳ್ಳಿ ಒಲಿಯಿತು (86.23 ಮೀ.).