ಹೊಸದಿಲ್ಲಿ: ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದ ವೇಳೆ ಅಶಿಸ್ತಿನ ವರ್ತನೆ ತೋರಿದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಈಗಾಗಲೇ 2 ಅಂತಾರಾಷ್ಟ್ರೀಯ ಪಂದ್ಯಗಳ ಅಮಾನತಿಗೆ ಒಳಗಾಗಿದ್ದಾರೆ.
ಹೀಗಾಗಿ ಅವರು ಮುಂಬರುವ ಏಷ್ಯಾಡ್ ಸ್ಪರ್ಧೆಯ ಮೊದಲೆರಡು ಪಂದ್ಯಗಳಿಂದ ಹೊರಗುಳಿಯಬೇಕಾಗುತ್ತದೆ. ಇದು ವಾಸ್ತವ. ಸ್ವಾರಸ್ಯವೆಂದರೆ, ಭಾರತ ತಂಡ ಏಷ್ಯಾಡ್ ಫೈನಲ್ ಪ್ರವೇಶಿಸಿದರಷ್ಟೇ ಕೌರ್‌ಗೆ ಆಡಲು ಸಾಧ್ಯವಾಗಲಿದೆ ಎಂಬುದು!
ಈ ಪಂದ್ಯಾವಳಿಯ ಮಾದರಿಯೇ ಇದಕ್ಕೆ ಕಾರಣ. ಪುರುಷರ ಹಾಗೂ ವನಿತಾ ವಿಭಾಗಗಳೆರಡರಲ್ಲೂ ಭಾರತ, ಪಾಕಿಸ್ಥಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಕ್ವಾರ್ಟರ್ ಫೈನಲ್ ಹಂತದಿಂದ ತಮ್ಮ ಹೋರಾಟ ಆರಂಭಿಸಲಿವೆ. ಜೂ. ಒಂದಕ್ಕೆ ಅನ್ವಯವಾಗುವ ಐಸಿಸಿ ರ್‍ಯಾಂಕಿಂಗ್ ಇದಕ್ಕೆ ಮಾನದಂಡವಾಗಿದೆ.
ಇದರಿಂದಾಗಿ ಹರ್ಮನ್‌ಪ್ರೀತ್‌ಗೆ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್‌ನಲ್ಲಿ ಆಡಲು ಸಾಧ್ಯವಾಗದು. ಭಾರತ ತಂಡ ಫೈನಲ್ ಪ್ರವೇಶಿಸಿದರಷ್ಟೇ ಕೌರ್ ಕಣಕ್ಕಿಳಿಯಬಹುದಾಗಿದೆ! ಇಲ್ಲವಾದರೆ ಚೀನಕ್ಕೆ ಹೋಗಿ “ಏಷ್ಯಾಡ್ ಗ್ರಾಮ’ಕ್ಕೆ ಸುತ್ತು ಹಾಕಿ ವಾಪಸ್ ಬರಬೇಕಾಗುತ್ತದೆ.
ವನಿತಾ ವಿಭಾಗದ ಕ್ರಿಕೆಟ್ ಸ್ಪರ್ಧೆ ಸೆ. 19ರಂದು ಆರಂಭವಾಗಲಿದ್ದು, ಒಟ್ಟು 14 ತಂಡಗಳು ಕಣದಲ್ಲಿವೆ. ಪುರುಷರ ವಿಭಾಗದಲ್ಲಿ 18 ತಂಡಗಳು ಪಾಲ್ಗೊಳ್ಳುತ್ತವೆ. ಸೆ. 26ರಂದು ಸ್ಪರ್ಧೆ ಮೊದಲ್ಗೊಳ್ಳಲಿದೆ. ಒಂದು ವೇಳೆ ಭಾರತ ಫೈನಲ್ ತನಕ ಸಾಗಿದರೆ ಸತತ 3 ದಿನ ಪಂದ್ಯಗಳನ್ನಾಡಬೇಕಾಗುತ್ತದೆ. ಅ. 5ರಂದು ಕ್ವಾರ್ಟರ್ ಫೈನಲ್, ಅ. 6ರಂದು ಸೆಮಿಫೈನಲ್ ಮತ್ತು ಅ. 7ರಂದು ಫೈನಲ್ ನಡೆಯಲಿದೆ.