ಏಷ್ಯಾ ಕಪ್ ಕ್ರಿಕೆಟ್ ಆತಿಥ್ಯ ಮತ್ತೂಮ್ಮೆ ಭಾರತ-ಪಾಕಿಸ್ಥಾಗಳ ನಡುವೆ ವಿವಾದದ ಕೇಂದ್ರವಾಗಿದೆ. ಆರಂಭದಲ್ಲಿ ಏಷ್ಯಾ ಕಪ್ ಅನ್ನು ಏಕದಿನ ಮಾದರಿಯಲ್ಲಿ ಪಾಕಿಸ್ಥಾದಲ್ಲಿ ಆಯೋಜಿಸಲು ನಿರ್ಧಾರವಾಗಿತ್ತು. ಕೆಲವು ತಿಂಗಳ ಅನಂತರ ಅರ್ಥಾತ್ ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ಪುನರಾಯ್ಕೆಯಾದ ಮೇಲೆ, ಭಾರತ ಪಾಕಿಸ್ಥಾನಕ್ಕೆ ತೆರಳಲು ಸಾಧ್ಯವಿಲ್ಲ. ಆದ್ದರಿಂದ ಏಷ್ಯಾ ಕಪ್‌ನ್ನು° ಸ್ಥಳಾಂತರಿಸಬೇಕಾಗುತ್ತದೆ ಎಂದು ಹೇಳಿದ್ದರು. ಇದಕ್ಕೆ ಅಂದಿನಿಂದಲೂ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಒಪ್ಪಿಕೊಂಡಿಲ್ಲ. ಈಗದು ನಿಲುವನ್ನು ಇನ್ನಷ್ಟು ಕಠಿನ ಮಾಡಿಕೊಂಡಿದೆ. ಒಂದು ವೇಳೆ ಏಷ್ಯಾ ಕಪ್ ಪಾಕಿಸ್ಥಾನದಲ್ಲಿ ನಡೆಯದೇ ಹೋದರೆ ನಾವು ಇದೇ ವರ್ಷ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಕೂಟ ವನ್ನು ಬಹಿಷ್ಕರಿಸುತ್ತೇವೆ ಎಂದು ಪಿಸಿಬಿ ಅಧ್ಯಕ್ಷ ನಜಾಮ್ ಸೇಥಿ ಹೇಳಿದ್ದಾರೆ.
ಒಂದು ವೇಳೆ ತನ್ನ ಪಟ್ಟನ್ನು ಪಾಕಿಸ್ಥಾನ ಮುಂದುವರಿಸಿದ್ದೇ ಆದರೆ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಬಿಕ್ಕಟ್ಟು ವಿವಾದ ಹುಟ್ಟಿಕೊಳ್ಳಬಹುದು. ನಿಯಮಗಳ ಪ್ರಕಾರ ಯಾವುದೇ ದೇಶಗಳ ನಡುವೆ ಏನೇ ವೈಮನಸ್ಸಿದ್ದರೂ, ಐಸಿಸಿ ನೇರವಾಗಿ ಆಯೋಜಿಸುವ ಕೂಟವನ್ನು ಬಹಿಷ್ಕರಿಸುವಂತಿಲ್ಲ. ಹಾಗೆಯೇ ಏಷ್ಯಾ ಕ್ರಿಕೆಟ್ ಸಮಿತಿ (ಎಸಿಸಿ) ನಡೆಸುವ ಏಷ್ಯಾ ಕಪ್‌ನಲ್ಲೂ ರಾಷ್ಟ್ರವೊಂದು ಪಾಲ್ಗೊಳ್ಳಬೇಕಾಗುತ್ತದೆ.
ಸದ್ಯ ಬಿಸಿಸಿಐ, ಪಾಕ್‌ಗೆ ತೆರಳಲು ಭಾರತ ಸರಕಾರ ಅನುಮತಿಸುವುದಿಲ್ಲ, ಆದ್ದರಿಂದ ಏಷ್ಯಾ ಕಪ್ ಅನ್ನು ಪಾಕ್ ಆತಿಥೇಯತ್ವದಲ್ಲೇ ತಟಸ್ಥ ತಾಣದಲ್ಲಿ ನಡೆಸಿ ಎಂದು ಹೇಳುತ್ತಿದೆ. ಆದರೆ ಪಾಕ್ ಮಾತ್ರ ಒಂದು ವೇಳೆ ಬಿಸಿಸಿಐಗೆ ಬರಲು ಸಾಧ್ಯವಿಲ್ಲವಾದರೆ, ಭಾರತ-ಪಾಕ್ ಪಂದ್ಯಗಳನ್ನು ಮಾತ್ರ ತಟಸ್ಥ ತಾಣದಲ್ಲಿ ಆಡಿಸೋಣ, ಉಳಿದ ಪಂದ್ಯಗಳನ್ನು ಪಾಕ್‌ನಲ್ಲೇ ನಡೆಸೋಣ ಎಂದು ಹೇಳಿದೆ. ಆದರೆ ಬಿಸಿಸಿಐ ಈ ಯಾವುದೇ ಪ್ರಸ್ತಾವಕ್ಕೂ ಒಪ್ಪುತ್ತಿಲ್ಲ. ಶ್ರೀಲಂಕಾ ಅಥವಾ ಯುಎಇಗೆ ಸ್ಥಳಾಂತರಿಸಿ ಎಂದೇ ಹೇಳುತ್ತಿದೆ. ಇದು ಪಾಕ್‌ಗೆ ಆರ್ಥಿಕವಾಗಿ ಬಹಳ ನಷ್ಟವುಂಟು ಮಾಡುವ ವಿದ್ಯಮಾನ. ಇದಕ್ಕೆ ಒಪ್ಪಲು ಪಿಸಿಬಿ ಸಿದ್ಧವಿಲ್ಲ. ಮತ್ತೊಂದು ಕಡೆ ವಿಶ್ವ ಕ್ರಿಕೆಟ್ ಮೇಲೆ ಬಿಸಿಸಿಐಗಿರುವ ಪ್ರಭಾವೀ ಸ್ಥಾನವನ್ನು ಪಾಕ್ ವಿರೋಧಿಸಿಕೊಂಡೇ ಬರುತ್ತಿದೆ.
ಹೀಗಾಗಿ ಅದಿಟ್ಟಿರುವ ಹೊಸ ಅಸ್ತ್ರವೆಂದರೆ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗೆ ತಾನು ಬರುವುದಿಲ್ಲ ಎಂಬ ಮಾತು. ಇದು ಐಸಿಸಿಗೆ ಒತ್ತಡ ತರುತ್ತದೆ, ಪರೋಕ್ಷವಾಗಿ ಬಿಸಿಸಿಐಗೂ ಒತ್ತಡ ತರುತ್ತದೆ. ಭಾರತ-ಪಾಕ್ ಪಂದ್ಯಗಳನ್ನು ಅಭಿಮಾನಿಗಳು ಪೂರ್ಣ ಪ್ರಮಾಣದಲ್ಲಿ ವೀಕ್ಷಿಸುತ್ತಾರೆ. ಇದರಿಂದ ಭಾರೀ ಆರ್ಥಿಕ ಲಾಭವಿದೆ. ಇದನ್ನು ಪಾಕ್ ಬಹಿಷ್ಕರಿಸಿದರೆ ಕೂಟಕ್ಕೂ ಹೊಡೆತವಿದೆ. ಈ ಒತ್ತಡ ತಂತ್ರವನ್ನು ಬಿಸಿಸಿಐ ಹೇಗೆ ನಿಭಾಯಿಸುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಒಂದು ವೇಳೆ ಬಿಸಿಸಿಐ, ಪಾಕ್ ಇಲ್ಲದೇ ನಡೆಸಲು ಸಿದ್ಧವಾದರೂ ಅದನ್ನು ಐಸಿಸಿ, ಇತರೆ ರಾಷ್ಟ್ರಗಳು ಒಪ್ಪಿಕೊಳ್ಳುವುದು ಅನುಮಾನ. ಪಾಕ್‌ನ ಹೊಸ ಅಸ್ತ್ರಕ್ಕೆ ಬಿಸಿಸಿಐ ಒಂದು ಸಮಂಜಸ ಉತ್ತರ ಕಂಡುಕೊಳ್ಳಲೇಬೇಕಿದೆ.
ಇದು ಕೇವಲ ಬಿಸಿಸಿಐನ ನಿರ್ಧಾರ ವಷ್ಟೇ ಅಲ್ಲ, ಕೇಂದ್ರ ಸರಕಾರವೂ ಪಾಕಿಸ್ಥಾನಕ್ಕೆ ಕ್ರಿಕೆಟ್ ತಂಡ ಒಪ್ಪಿಗೆ ನೀಡುವ ಎಲ್ಲ ಸಾಧ್ಯತೆಗಳು ಕಡಿಮೆ. ಅಲ್ಲಿ ಭಯೋತ್ಪಾದನೆ ಮತ್ತು ಗಡಿಯಾಚೆಗಿನ ಉಗ್ರವಾದ ಕಡಿಮೆಯಾದರೆ ಮಾತ್ರ ಕ್ರಿಕೆಟ್ ಸಂಬಂಧ ಎಂದು ಕಟ್ಟು ನಿಟ್ಟಾಗಿಯೇ ಹೇಳಿದೆ. ಹೀಗಾಗಿ ಒತ್ತಡ ತಂತ್ರ ಬದಲಿಗೆ ಪಾಕಿಸ್ಥಾನ, ಉಗ್ರ ವಾದ ನಿಗ್ರಹದತ್ತ ಗಮನ ಹರಿಸಿದರೆ ಎಲ್ಲ ಸಂಬಂಧಗಳು ಸುಧಾರಣೆಯಾಗಬಹುದು.