Advertisement

ಏಷ್ಯಾ ಕಪ್‌ ಸೂಪರ್‌ ಫೋರ್‌: ಸೇಡು ತೀರಿಸಿಕೊಂಡ ಪಾಕ್‌

11:26 PM Sep 04, 2022 | Team Udayavani |

ದುಬಾೖ: ಮೊಹಮ್ಮದ್‌ ರಿಜ್ವಾನ್‌ ಮತ್ತು ಮೊಹಮ್ಮದ್‌ ನವಾಜ್‌ ಅವರ ಬಿರುಸಿನ ಬ್ಯಾಟಿಂಗ್‌ ಸಾಹಸದಿಂದ ರವಿವಾರದ ಏಷ್ಯಾ ಕಪ್‌ ಸೂಪರ್‌ ಫೋರ್‌ ಮುಖಾಮುಖಿಯಲ್ಲಿ ಪಾಕಿಸ್ಥಾನ 5 ವಿಕೆಟ್‌ಗಳಿಂದ ಭಾರತವನ್ನು ಮಣಿಸಿದೆ. ಲೀಗ್‌ ಹಂತದ ಸೋಲಿಗೆ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 7 ವಿಕೆಟಿಗೆ 181 ರನ್‌ ರಾಶಿ ಹಾಕಿದರೆ, ಪಾಕಿಸ್ಥಾನ 19.5 ಓವರ್‌ಗಳಲ್ಲಿ 5 ವಿಕೆಟಿಗೆ 182 ರನ್‌ ಬಾರಿಸಿತು.

ಆರಂಭಕಾರ ಮೊಹಮ್ಮದ್‌ ರಿಜ್ವಾನ್‌ ಚೇಸಿಂಗ್‌ ವೇಳೆ ಕ್ರೀಸ್‌ ಆಕ್ರಮಿಸಿಕೊಂಡರು. ನಾಯಕ ಬಾಬರ್‌ ಆಜಂ (14), ಫ‌ಕರ್‌ ಜಮಾನ್‌ (15) ಸ್ಪಿನ್‌ ಮೋಡಿಗೆ ಸಿಲುಕಿ ಬಹಳ ಬೇಗ ನಿರ್ಗಮಿಸಿದರೂ ರಿಜ್ವಾನ್‌ ಇನ್ನಿಂಗ್ಸ್‌ ಆಧರಿಸಿ ನಿಂತರು. ಕೀಪಿಂಗ್‌ ವೇಳೆ ಗಾಯಗೊಂಡರೂ ಅವರ ಬ್ಯಾಟಿಂಗ್‌ ಅಬ್ಬರಕ್ಕೆ ಇದರಿಂದ ಯಾವುದೇ ಅಡ್ಡಿಯಾಗಲಿಲ್ಲ. ಜವಾಬ್ದಾರಿಯುತ ಆಟವಾಡಿ 15ನೇ ಅರ್ಧ ಶತಕ ಪೂರ್ತಿಗೊಳಿಸಿದರು.

ರಿಜ್ವಾನ್‌ಗೆ ಮೊಹಮ್ಮದ್‌ ನವಾಜ್‌ ಉತ್ತಮ ಬೆಂಬಲ ನೀಡಿದರು. ಮೂಲತಃ ಬೌಲರ್‌ ಆಗಿದ್ದ ನವಾಜ್‌ ಅವರನ್ನು ಎಡಗೈ ಬ್ಯಾಟರ್‌ ಎಂಬ ಕಾರಣಕ್ಕಾಗಿ ಭಡ್ತಿ ನೀಡಿದ ಪ್ರಯೋಗ ಪಾಕ್‌ಗೆ ಬಂಪರ್‌ ತಂದಿತು. ಈ ಜೋಡಿ 41 ಎಸೆತಗಳಿಂದ 73 ರನ್‌ ಪೇರಿಸಿತು. ರಿಜ್ವಾನ್‌ 71 ರನ್‌ (51 ಎಸೆತ, 6 ಬೌಂಡರಿ, 2 ಸಿಕ್ಸರ್‌), ನವಾಜ್‌ 42 ರನ್‌ (20 ಎಸೆತ, 6 ಬೌಂಡರಿ, 2 ಸಿಕ್ಸರ್‌) ಬಾರಿಸಿದರು.

ಕೊನೆಯ 7 ಓವರ್‌ಗಳಲ್ಲಿ 75 ರನ್‌, ಡೆತ್‌ ಓವರ್‌ಗಳಲ್ಲಿ 47 ರನ್‌, 2 ಓವರ್‌ಗಳಲ್ಲಿ 26 ರನ್‌, ಅಂತಿಮ ಓವರ್‌ನಲ್ಲಿ 7 ರನ್‌ ತೆಗೆಯುವ ಸವಾಲು ಪಾಕಿಸ್ಥಾನಕ್ಕೆ ಎದುರಾಯಿತು.

Advertisement

ಭಾರತ ಸ್ಫೋಟಕ ಆರಂಭ
ರೋಹಿತ್‌-ರಾಹುಲ್‌ ಸ್ಫೋಟಕ ಆರಂಭ ನೀಡಿದರು. ನಸೀಮ್‌ ಶಾ ಅವರ ಮೊದಲ ಓವರ್‌ನಲ್ಲೇ ಬೌಂಡರಿ, ಸಿಕ್ಸರ್‌ ಸಿಡಿದು ಬಂತು. ಮೊದಲು ಮುನ್ನುಗ್ಗಿ ಬಾರಿಸಿದ್ದು ರೋಹಿತ್‌ ಶರ್ಮ. ಶಾ ಅವರ ಮುಂದಿನ ಓವರ್‌ನಲ್ಲಿ ರಾಹುಲ್‌ ಗುಡುಗಿದರು. ಪಾಕ್‌ ವೇಗಿಗೆ ಅವಳಿ ಸಿಕ್ಸರ್‌ಗಳ ರುಚಿ ತೋರಿಸಿದರು. 3 ಓವರ್‌ಗಳಲ್ಲಿ 34 ರನ್‌ ಹರಿದು ಬಂತು.

ಮೊದಲ ಬೌಲಿಂಗ್‌ ಬದಲಾವಣೆ ರೂಪದಲ್ಲಿ ದಾಳಿಗಿಳಿದ ಮೊಹಮ್ಮದ್‌ ಹಸ್ನೇನ್‌ ಅವರನ್ನು ರೋಹಿತ್‌ ಬೌಂಡರಿ, ಸಿಕ್ಸರ್‌ ಮೂಲಕ ಸ್ವಾಗತಿಸಿದರು. ಸ್ಪಿನ್ನರ್‌ ಮೊಹಮ್ಮದ್‌ ನವಾಜ್‌ ಕೂಡ ನಿಯಂತ್ರಣ ಸಾಧಿಸಲು ವಿಫ‌ಲರಾದರು. 4.2 ಓವರ್‌ಗಳಲ್ಲಿ 50 ರನ್‌ ಹರಿದು ಬಂತು.

6ನೇ ಓವರ್‌ನಲ್ಲಿ ರವೂಫ್ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು. 28 ರನ್‌ ಮಾಡಿದ ರೋಹಿತ್‌, ಖುಷಿªಲ್‌ ಕೈಗೆ ಕ್ಯಾಚ್‌ ನೀಡಿ ವಾಪಸಾದರು. 16 ಎಸೆತ ಎದುರಿಸಿದ ಭಾರತದ ಕಪ್ತಾನ 3 ಫೋರ್‌, 2 ಸಿಕ್ಸರ್‌ ಬಾರಿಸಿ ರಂಜಿಸಿದರು. ಮೊದಲ ವಿಕೆಟಿಗೆ 5.1 ಓವರ್‌ಗಳಲ್ಲಿ 54 ರನ್‌ ಬಂತು. ಪವರ್‌ ಪ್ಲೇ ಅವಧಿಯಲ್ಲಿ ಭಾರತದ ಸ್ಕೋರ್‌ ಒಂದಕ್ಕೆ 62.

7ನೇ ಓವರ್‌ನಲ್ಲಿ ದಾಳಿಗಿಳಿದ ಲೆಗ್‌ಸ್ಪಿನ್ನರ್‌ ಶದಾಬ್‌ ಖಾನ್‌ ಮೊದಲ ಎಸೆತದಲ್ಲೇ ಯಶಸ್ಸು ಸಾಧಿಸಿದರು. ಬಹಳ ಸಮಯದ ಬಳಿಕ ಜೋಶ್‌ ತೋರಿದ ಕೆ.ಎಲ್‌. ರಾಹುಲ್‌ ಆಟಕ್ಕೆ ತೆರೆ ಎಳೆದರು. ರಾಹುಲ್‌ ಗಳಿಕೆಯೂ 28 ರನ್‌ (20 ಎಸೆತ, 1 ಬೌಂಡರಿ, 2 ಸಿಕ್ಸರ್‌).

ವಿರಾಟ್‌ ಕೊಹ್ಲಿ-ಸೂರ್ಯಕುಮಾರ್‌ ಯಾದವ್‌ ಕೂಡ ಆರಂಭಿಕರ ಲಯದಲ್ಲೇ ಸಾಗುವ ಸೂಚನೆ ನೀಡಿದರೂ ಇದರಲ್ಲಿ ಯಶಸ್ಸು ವಿಶೇಷ ಯಶಸ್ಸು ಕಾಣಲಿಲ್ಲ. 3ನೇ ವಿಕೆಟಿಗೆ 29 ರನ್‌ ಒಟ್ಟುಗೂಡಿದ ವೇಳೆ ಸೂರ್ಯಕುಮಾರ್‌ (13) ವಿಕೆಟ್‌ ಉರುಳಿತ್ತು. ಇದರೊಂದಿಗೆ ಪಾಕ್‌ ವಿರುದ್ಧ ಯಾದವ್‌ ಅವರ ವೈಫ‌ಲ್ಯ ಮುಂದುವರಿಯಿತು. ಹಿಂದಿನೆರಡು ಪಂದ್ಯಗಳಲ್ಲಿ ಅವರು ಗಳಿಸಿದ್ದು 11 ಮತ್ತು 18 ರನ್‌ ಮಾತ್ರ. ಅರ್ಧ ಹಾದಿ ಪೂರ್ತಿಗೊಳ್ಳುವ ವೇಳೆ ಭಾರತ 3 ವಿಕೆಟ್‌ ನಷ್ಟಕ್ಕೆ 93 ರನ್‌ ಗಳಿಸಿತ್ತು.

ಇಲ್ಲಿಂದ ಮುಂದೆ ಪಾಕ್‌ ಬೌಲರ್‌ಗಳ ಹಿಡಿತ ಬಲಗೊಳ್ಳತೊಡಗಿತು. ಶಬಾದ್‌ ಎಸೆತವೊಂದನ್ನು ರಿವರ್ಸ್‌ ಸ್ವೀಪ್‌ ಮಾಡಲು ಹೋದ ರಿಷಭ್‌ ಪಂತ್‌ ವಿಕೆಟ್‌ ಕೈಚೆಲ್ಲಿದರು. ಪಂತ್‌ ಗಳಿಕೆ 12 ಎಸೆತಗಳಿಂದ 14 ರನ್‌. ಪಾಕಿಸ್ಥಾನ ವಿರುದ್ಧದ ಮೊದಲ ಪಂದ್ಯದ ಹೀರೋ ಹಾರ್ದಿಕ್‌ ಪಾಂಡ್ಯ ಇಲ್ಲಿ ಜೀರೋ ಆದದ್ದು ಬೇಸರ ಮೂಡಿಸಿತು.

 

Advertisement

Udayavani is now on Telegram. Click here to join our channel and stay updated with the latest news.

Next