Advertisement

ಏಷ್ಯಾಕಪ್‌ ವೇಳಾಪಟ್ಟಿಯಲ್ಲಿ ಮತ್ತೂಂದು ಎಡವಟ್ಟು

06:00 AM Jul 27, 2018 | |

ಮುಂಬಯಿ: 2018ರ ಏಷ್ಯಾ ಕಪ್‌ ಏಕದಿನ ಕ್ರಿಕೆಟ್‌ ವೇಳಾಪಟ್ಟಿಯಲ್ಲಿ ಮತ್ತೂಂದು ಎಡವಟ್ಟು ಬೆಳಕಿಗೆ ಬಂದಿದೆ. ಇಂಗ್ಲೆಂಡ್‌ನ‌ ದೀರ್ಘ‌ ಪ್ರವಾಸ ಮುಗಿಸಿ ದಣಿದಿರುವ ಭಾರತ ಅದು ಮುಗಿಯುತ್ತಲೇ ಯುಎಇಯಲ್ಲಿ ನಡೆಯುವ ಏಷ್ಯಾಕಪ್‌ಗೆ ಕಾಲಿಡಲಿದೆ. ಆದರೆ ಇಲ್ಲೂ ಕೂಡ ವಿವೇಚನೆಯಿಲ್ಲದ ವೇಳಾಪಟ್ಟಿ ಬಿಸಿಸಿಐ ಬೇಸರಕ್ಕೆ ಕಾರಣವಾಗಿದೆ. 

Advertisement

ಸೆ.18ಕ್ಕೆ ಭಾರತ ಅರ್ಹತಾ ಸುತ್ತಿನಲ್ಲಿ ಗೆದ್ದ ತಂಡದ ವಿರುದ್ಧ ಆಡಬೇಕಿದ್ದರೆ, ಸೆ.19ರಂದು ಪ್ರಬಲ ಪಾಕಿಸ್ಥಾನದ ವಿರುದ್ಧ ಆಡಬೇಕಿದೆ. ಈ ಸತತ ಎರಡು ಪಂದ್ಯಗಳ ವೇಳಾಪಟ್ಟಿ ಬದಲಿಸಿ ಎಂದು ಬಿಸಿಸಿಐ ಆಗ್ರಹಿಸಿದೆ.

ಇಂತಹದೊಂದು ವೇಳಾಪಟ್ಟಿಯನ್ನು ಸಂಘಟಕರು ತಯಾರಿಸಿದ್ದಾದರೂ ಹೇಗೆ? ಅದು ಬಿಸಿಸಿಐಯನ್ನು ಸಂಪರ್ಕಿಸದೇ ಹೀಗೆ ಮಾಡಿತೇ ಎಂಬ ಪ್ರಶ್ನೆಗಳು ಇದೀಗ ಶುರುವಾಗಿವೆ. ಟಿ20ಯಲ್ಲಾದರೆ ಸತತ ಎರಡು ಪಂದ್ಯ ಆಡುವುದು ಸಾಧ್ಯ. ಓವರ್‌ಗಳು ಕಡಿಮೆಯಿರುವುದರಿಂದ ತಂಡಕ್ಕೆ ತೀರಾ ಹೊರೆಯಾಗುವುದಿಲ್ಲ. ಆದರೆ 50 ಓವರ್‌ಗಳಿರುವ ಏಕದಿನ ಕೂಟದಲ್ಲಿ ಒಂದು ತಂಡ ಸತತವಾಗಿ ಎರಡು ಪಂದ್ಯವಾಡುವುದು ಸಾಧ್ಯವೇ ಇಲ್ಲದ ಮಾತು. ಇಂತಹ ತಿಳಿವಳಿಕೆಯಿಲ್ಲದ ವೇಳಾಪಟ್ಟಿಯನ್ನು ಎಲ್ಲೆಡೆ ಖಂಡಿಸಲಾಗಿದೆ.

ಈಗಾಗಲೇ ಇಂಗ್ಲೆಂಡ್‌ನ‌ಲ್ಲಿ ಭಾರತ ಮೂರು ಟಿ20, ಮೂರು ಏಕದಿನ ಪಂದ್ಯಗಳನ್ನಾಡಿದೆ. ಟಿ20 ಸರಣಿ ಗೆದ್ದಿದ್ದರೆ, ಏಕದಿನ ಸರಣಿ ಸೋತಿದೆ. ಇದರ ನಡುವೆ 5 ಟೆಸ್ಟ್‌ ಪಂದ್ಯಗಳ ಸುದೀರ್ಘ‌ ಸರಣಿ ಆ. 1ರಿಂದ ಶುರುವಾಗಲಿದೆ. ಅದು ಸೆ. 12ಕ್ಕೆ ಮುಗಿಯಲಿದೆ. ಸೆ.15ರಿಂದ ಏಷ್ಯಾಕಪ್‌ ಆರಂಭವಾಗಲಿದೆ. ಭಾರತಕ್ಕೆ ಮೊದಲ ಪಂದ್ಯವಿರುವುದು ಸೆ.18ಕ್ಕೆ! ಇದೇ ಈಗ ಒತ್ತಡಕ್ಕೆ ಕಾರಣವಾಗಿದೆ. ಇದರ ಜತೆಗೆ ಸೆ.19ಕ್ಕೆ ಇನ್ನೊಂದು ಪಂದ್ಯವಾಡುವುದು ಸಾಧ್ಯವೇ ಇಲ್ಲದ ಮಾತಾಗಿದೆ. ಇದನ್ನು ಆಟಗಾರರು ಕೂಡ ಬಿಸಿಸಿಐ ಗಮನಕ್ಕೆ ತಂದಿದ್ದಾರೆ.

ಏಷ್ಯಾಕಪ್‌ ಆಡಲೇಬೇಡಿ: ಸೆಹವಾಗ್‌
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಕೂಡ ಈ ರೀತಿಯ ಅರ್ಥವಿಲ್ಲದ ವೇಳಾಪಟ್ಟಿಯನ್ನು ಟೀಕಿಸಿದ್ದಾರೆ. ಅವರು ಒಂದು ಹೆಜ್ಜೆ ಮುಂದುವರಿದು ಇಂತಹ ಕೂಟದಲ್ಲಿ ಪಾಲ್ಗೊಳ್ಳಲೇಬೇಡಿ, ಅದರ ಬದಲು ಸ್ವದೇಶಿ ಅಥವಾ ವಿದೇಶಿ ಸರಣಿಗೆ ಸಿದ್ಧತೆ ಶುರು ಮಾಡಿ ಎಂದಿದ್ದಾರೆ. “ಈ ವೇಳಾಪಟ್ಟಿಯನ್ನು ನೋಡಿ ಆಘಾತವಾಯಿತು. ಇಂಗ್ಲೆಂಡ್‌ನ‌ಲ್ಲಿ ಒಂದು ಟಿ20 ಪಂದ್ಯವಾದ ಅನಂತರ 2 ದಿನ ವಿಶ್ರಾಂತಿ ಕೊಡುತ್ತಾರೆ. ಅಂತಹದ್ದರಲ್ಲಿ ಏಕದಿನ ಸರಣಿಯಲ್ಲಿ ವಿಶ್ರಾಂತಿಯಿಲ್ಲದೇ ಆಡಲು ಸಾಧ್ಯವೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

9.72 ಕೋಟಿ ರೂ. ದಂಡ ಪಾವತಿಗೆ ಬಿಸಿಸಿಐ ನಿರ್ಧಾರ
2009ರ ಐಪಿಎಲ್‌ ಭಾರತದ ಬದಲು ದ.ಆಫ್ರಿಕಾದಲ್ಲಿ ನಡೆದಿತ್ತು. ಭಾರತದಲ್ಲಿ ಸಾರ್ವತ್ರಿಕ ಚುನಾವಣೆಯಿದ್ದ ಹಿನ್ನೆಲೆಯಲ್ಲಿ ಅದನ್ನು ಸ್ಥಳಾಂತರಿಸಲಾಗಿತ್ತು. ಆ ಸಂದರ್ಭದಲ್ಲಿ ಬಿಸಿಸಿಐ ವಿದೇಶಿ ವಿನಿಮಯ ಉಲ್ಲಂಘನೆ ಮಾಡಿದೆ ಎಂಬ ಹಿನ್ನೆಲೆಯಲ್ಲಿ ಸುದೀರ್ಘ‌ ವಿಚಾರಣೆ ನಡೆಸಿ ಜಾರಿ ನಿರ್ದೇಶನಾಲಯ 82 ಕೋಟಿ ರೂ. ದಂಡವನ್ನು ಬಿಸಿಸಿಐಗೆ ವಿಧಿಸಿದೆ. 

ಈ ಪೈಕಿ ಅಂದಿನ ಖಜಾಂಚಿ ಎಂ.ಪಿ.ಪಾಂಡೋವ್‌ ಮೇಲೆ 9.72 ಕೋಟಿ ರೂ. ದಂಡ ಹೇರಿದೆ. ಅದನ್ನು ಪಾವತಿಸಲು ಬಿಸಿಸಿ ನಿರ್ಧಾರ ಮಾಡಿದೆ. ಒಂದು ವೇಳೆ ನ್ಯಾಯಾಲಯದ ಮೊರೆ ಹೋಗಿ ದಂಡದಿಂದ ಪಾರಾದರೆ ಈ ಮೊತ್ತವನ್ನು ಪಾಂಡೋವ್‌ ಅವರಿಂದ ಹಿಂಪಡೆಯಲು ಬಿಸಿಸಿಐ ನಿರ್ಧರಿಸಿದೆ.

ನಿಯಮಗಳ ಪ್ರಕಾರ ದ.ಆಫ್ರಿಕಾದ ಬ್ಯಾಂಕ್‌ಗಳಿಗೆ ಬಿಸಿಸಿಐ ಹಣವನ್ನು ವರ್ಗಾಯಿಸುವ ಮುನ್ನ ಆರ್‌ಬಿಐ ಅನುಮತಿ ಪಡೆದಿರಬೇಕಿತ್ತು. ಆದರೆ ಅನುಮತಿ ಪಡೆಯದೆಯೇ ಬಿಸಿಸಿಐ ಹಣ ವರ್ಗಾಯಿಸಿತ್ತು. ಇದನ್ನು ತಪ್ಪೆಂದು ಜಾರಿ ನಿರ್ದೇಶನಾಲಯ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷÒ ಎನ್‌.ಶ್ರೀನಿವಾಸನ್‌ಗೆ 11.53 ಕೋಟಿ ರೂ., ಐಪಿಎಲ್‌ ಪದಚ್ಯುತ ಮುಖ್ಯಸ್ಥ ಲಲಿತ್‌ ಮೋದಿಗೆ 10.65 ಕೋಟಿ ರೂ. ದಂಡವನ್ನು ವಿಧಿಸಲಾಗಿದೆ. ಇದನ್ನು ಅವರೇ ಸ್ವತಃ ಪಾವತಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next