ಕೊಲಂಬೊ: ಏಷ್ಯಾ ಕಪ್ ಕೂಟದ ಸೆಮಿ ಫೈನಲ್ ಪಂದ್ಯ ಎಂದೇ ಬಿಂಬಿತವಾಗಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಸೂಪರ್ ಫೋರ್ ಪಂದ್ಯಕ್ಕೆ ಮಳೆ ಕಾಟ ಎದುರಾಗಿದೆ. ಮೂರು ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯವು ಮಳೆಯಿಂದಾಗಿ ಟಾಸ್ ಕೂಡಾ ಆಗದೆ ವಿಳಂಬವಾಗಿದೆ.
ಉಭಯ ತಂಡಗಳಿಗೂ ಇಂದಿನ ಪಂದ್ಯ ಬಹು ಮುಖ್ಯ. ಇಂದಿನ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್ ಪ್ರವೇಶಿಸಿದೆ. ಒಂದು ವೇಳೆ ಪಂದ್ಯ ರದ್ದಾದರೆ ಅದು ಶ್ರೀಲಂಕಾಗೆ ಲಾಭವಾಗಲಿದೆ. ಸೂಪರ್ ಫೋರ್ ಅಂಕಪಟ್ಟಿಯಲ್ಲಿ ರನ್ ರೇಟ್ ನಲ್ಲಿ ಶ್ರೀಲಂಕಾ ತಂಡವು ಪಾಕಿಸ್ತಾನ ತಂಡಕ್ಕಿಂತ ಮೇಲಿದೆ. ಹೀಗಾಗಿ ಒಂದು ವೇಳೆ ಪಂದ್ಯ ರದ್ದಾದರೆ ಲಂಕಾಗೆ ಲಾಭವಾಗಲಿದೆ.
ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ಇಂದು ಒಮ್ಮೆ ಮಳೆ ಕಡಿಮೆಯಾಗಿ 3 ಗಂಟೆಗೆ ಟಾಸ್ ಹಾಕಲಾಗುವುದು ಎಂದು ನಿರ್ಧರಿಸಲಾಗಿತ್ತು. ಕವರ್ ಗಳನ್ನೂ ತೆಗೆಯಲಾಗಿತ್ತು. ಆದರೆ ಅದೇ ಸಮಯಕ್ಕೆ ಜೋರಾಗಿ ಮಳೆ ಸುರಿಯಲಾರಂಭಿಸಿದ್ದು, ಅಡ್ಡಿಯಾಗಿದೆ.
ಇದನ್ನೂ ಓದಿ:Lucknow: ಫೋನಿನಲ್ಲಿ ಬ್ಯುಸಿಯಾದ ತಾಯಿ; 3 ವರ್ಷದ ಮಗುವಿನ ಮೇಲೆ ಹರಿದ ಕಾರು
ಭಾರತವು ಈಗಾಗಲೇ ಫೈನಲ್ ಗೆ ಪ್ರವೇಶ ಪಡೆದಿದೆ. ಶುಕ್ರವಾರ ಭಾರತ ತಂಡವು ತನ್ನ ಕೊನೆಯ ಸೂಪರ್ ಫೋರ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಸತತ ಎರಡು ಪಂದ್ಯ ಸೋತಿರುವ ಬಾಂಗ್ಲಾದೇಶ ಈಗಾಗಲೇ ಫೈನಲ್ ರೇಸ್ ನಿಂದ ಹೊರಬಿದ್ದಿದೆ.