Advertisement

ವನಿತಾ ಏಷ್ಯಾ ಕಪ್‌ ಕ್ರಿಕೆಟ್‌; ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಭಾರತ

04:52 PM Oct 05, 2022 | Team Udayavani |

ಬಾಂಗ್ಲಾದೇಶ: ವನಿತಾ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ಹ್ಯಾಟ್ರಿಕ್‌ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

Advertisement

ಮೂರನೇ ಮುಖಾಮುಖಿಯಲ್ಲಿ ಮಂಧನಾ ಬಳಗ ಯುಎಇಯನ್ನು 104 ರನ್ನುಗಳ ಭಾರೀ ಅಂತರದಿಂದ ಕೆಡವಿತು.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 5 ವಿಕೆಟಿಗೆ 178 ರನ್‌ ಪೇರಿಸಿತು. ಜವಾಬಿತ್ತ ಯುಎಇ ಟೆಸ್ಟ್‌ ಶೈಲಿಯಲ್ಲಿ ಆಡಿತು; 20 ಓವರ್‌ಗಳಲ್ಲಿ ಗಳಿಸಿದ್ದು 4 ವಿಕೆಟಿಗೆ 74 ರನ್‌ ಮಾತ್ರ.

ಭಾರತದ ಅಜೇಯ ಓಟ
ಇದರೊಂದಿಗೆ ಭಾರತ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ ಬಾಗಿಲಿನ ಸಮೀಪ ನಿಂತಿದೆ. ಮೊದಲೆರಡು ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಮಲೇಷ್ಯಾವನ್ನು ಮಣಿಸಿತ್ತು. ಭಾರತದ ಮುಂದಿನ ಎದುರಾಳಿ ಪಾಕಿಸ್ಥಾನ. ಈ ಪಂದ್ಯ ಶುಕ್ರವಾರ ನಡೆಯಲಿದೆ.

ಭಾರತ ಆರಂಭಿಕ ಜೋಡಿಯಲ್ಲಿ ಮತ್ತೆ ಬದಲಾವಣೆ ಮಾಡಿತು. ಎಸ್‌. ಮೇಘನಾ ಜತೆ ರಿಚಾ ಘೋಷ್‌ ಆಡಳಿಳಿದರು. ಆದರೆ ಗೋಲ್ಡನ್‌ ಡಕ್‌ ಆಗಿ ತೆರಳಿದರು. ಮೇಘನಾ ಗಳಿಕೆ 10 ರನ್‌ ಮಾತ್ರ. ಡಿ. ಹೇಮಲತಾ 2 ರನ್‌ ಮಾಡಿ ರನೌಟ್‌ ಆದರು. 19 ರನ್ನಿಗೆ ಭಾರತದ 3 ವಿಕೆಟ್‌ ಬಿತ್ತು.

Advertisement

ವನ್‌ಡೌನ್‌ನಲ್ಲಿ ಬಂದ ದೀಪ್ತಿ ಶರ್ಮ, 5ನೇ ಕ್ರಮಾಂಕದಲ್ಲಿ ಆಡಳಿಲಿದ ಜೆಮಿಮಾ ರೋಡ್ರಿಗಸ್‌ ಬಿರುಸಿನ ಆಟಕ್ಕಿಳಿದರು. 4ನೇ ವಿಕೆಟಿಗೆ 129 ರನ್‌ ಹರಿದು ಬಂತು. ಲಂಕಾ ವಿರುದ್ಧ ಸಿಡಿದು ನಿಂತಿದ್ದ ಜೆಮಿಮಾ ಇಲ್ಲಿ 45 ಎಸೆತಗಳಿಂದ 75 ರನ್‌ ಬಾರಿಸಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಒಳಗೊಂಡಿತ್ತು. ದೀಪ್ತಿ ಶರ್ಮ 49 ಎಸೆತ ಎದುರಿಸಿ 64 ರನ್‌ ಹೊಡೆದರು (5 ಬೌಂಡರಿ, 2 ಸಿಕ್ಸರ್‌).

ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಈ ಪಂದ್ಯದಿಂದ ಹೊರಗುಳಿದರು. ಸ್ಮೃತಿ ಮಂಧನಾ ತಂಡವನ್ನು ಮುನ್ನಡೆಸಿದರು. ಆದರೆ ಬ್ಯಾಟಿಂಗ್‌ಗೆ ಇಳಿಯಲಿಲ್ಲ.

ಯುಎಇ ಆಮೆಗತಿಯಾಟ
ಯುಎಇ ಎರಡು ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಸಂಕಟಕ್ಕೆ ಸಿಲುಕಿತು. ತೀರ್ಥ ಸತೀಶ್‌ (1), ಇಶಾ ರೋಹಿತ್‌ ಓಜಾ (4), ನತಾಶಾ ಶೆರಿಯತ್‌ (0) ಬೇಗನೇ ಪೆವಿಲಿಯನ್‌ ಸೇರಿಕೊಂಡರು. ಆಗ ಸ್ಕೋರ್‌ಬೋರ್ಡ್‌ ಕೇವಲ 5 ರನ್‌ ದಾಖಲಿಸುತ್ತಿತ್ತು.

ಮುಂದಿನದು ಕವಿಶಾ ಮತ್ತು ಖುಷಿ ಶರ್ಮ ಅವರ ಆಮೆಗತಿಯ ಆಟ. 15.1 ಓವರ್‌ ನಿಭಾಯಿಸಿದ ಇವರು ಒಟ್ಟುಗೂಡಿಸಿದ್ದು 58 ರನ್‌ ಮಾತ್ರ!

ಸಂಕ್ಷಿಪ್ತ ಸ್ಕೋರ್‌: ಭಾರತ-5 ವಿಕೆಟಿಗೆ 178 (ಜೆಮಿಮಾ ಔಟಾಗದೆ 75, ದೀಪ್ತಿ 64). ಯುಎಇ-4 ವಿಕೆಟಿಗೆ 74 (ಕವಿಶಾ ಔಟಾಗದೆ 30, ಖುಷಿ 29, ರಾಜೇಶ್ವರಿ 29ಕ್ಕೆ 2).

ಪಂದ್ಯಶ್ರೇಷ್ಠ: ಜೆಮಿಮಾ ರೋಡ್ರಿಗಸ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next