ಕೊಲಂಬೊ: ಇಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ- ಪಾಕಿಸ್ಥಾನ ನಡುವಿನ ರವಿವಾರ ನಡೆಯಬೇಕಾಗಿದ್ದ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯ ಭಾರಿ ಮಳೆಯ ಕಾರಣದಿಂದಾಗಿ ಮೀಸಲು ದಿನವಾದ ಕಾರಣ ಸೋಮವಾರಕ್ಕೆ ಮುಂದೂಡಲಾಗಿದೆ.
ಪಲ್ಲೆಕೆಲೆಯಲ್ಲಿ ನಡೆದ ಲೀಗ್ ಪಂದ್ಯ ಮಳೆಯಲ್ಲಿ ಕೊಚ್ಚಿಹೋಗಿತ್ತು. ಈ ಪಂದ್ಯಕ್ಕೂ ಮಳೆ ಅಡ್ಡಿಯಾಗಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿತು.
ಮಳೆಯಿಂದಾಗಿ ಇಂದಿನ ಆಟವನ್ನು ರದ್ದುಗೊಳಿಸಲಾಗಿದ್ದು, ಮೀಸಲು ದಿನವಾದ ನಾಳೆ ಇಂದು ಆಟ ನಿಂತಿದ್ದ 24.1 ಓವರ್‌ಗಳಿಂದಲೇ ಪ್ರಾರಂಭವಾಗಲಿದ್ದು ಭಾರತ ಪೂರ್ಣ 50-ಓವರ್‌ಗಳ ಆಟವಾಡಲಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 03 ಗಂಟೆಗೆ ಪಂದ್ಯ ಪುನರಾರಂಭವಾಗಲಿದೆ.
ಪಾಕಿಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಭರ್ಜರಿ ಆರಂಭ ಒದಗಿಸಿಕೊಟ್ಟರು. ಇಬ್ಬರೂ ಆಕರ್ಷಕ ಅರ್ಧಶತಕ ಗಳಿಸಿ ಔಟಾದರು. ರೋಹಿತ್ ಶರ್ಮಾ 49 ಎಸೆತಗಳಲ್ಲಿ 56 ರನ್ ಗಳಿಸಿದ್ದ ವೇಳೆ ಶಾದಾಬ್ ಖಾನ್ ಎಸೆದ ಚೆಂಡನ್ನು ಫಹೀಮ್ ಅಶ್ರಫ್ ಕೈಗಿತ್ತು ನಿರ್ಗಮಿಸಿದರು. ಅವರು 6 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿದ್ದರು. ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಶುಭಮಾನ್ ಗಿಲ್ 58 ರನ್ (52ಎಸೆತ, 10 ಬೌಂಡರಿ) ಗಳಿಸಿದ್ದ ವೇಳೆ ಶಾಹೀನ್ ಅಫ್ರಿದಿ ಎಸೆದ ಚೆಂಡನ್ನು ಅಘಾ ಸಲ್ಮಾನ್ ಕೈಗಿತ್ತು ನಿರ್ಗಮಿಸಿದರು.
24.1 ಓವರ್ ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ಈ ವೇಳೆ ಭಾರಿ ಮಳೆ ಸುರಿದಿದ್ದು ಆ ಬಳಿಕ ಪಂದ್ಯ ಮುಂದುವರಿಸಲು ಸಾಧ್ಯವಾಗಲೇ ಇಲ್ಲ. ವಿರಾಟ್ ಕೊಹ್ಲಿ 8 ರನ್ ಮತ್ತು ಕೆಎಲ್ ರಾಹುಲ್ 17 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಕ್ರೀಡಾಂಗಣದ ಮತ್ತೊಂದು ಸುತ್ತಿನ ತಪಾಸಣೆಯನ್ನು ರಾತ್ರಿ 8:30 ನಡೆಸಿದ ಬಳಿಕ ವಿಪರೀತ ತೇವ ಕಂಡು ಬಂದಿದ್ದು ಅಂಪೈರ್‌ಗಳನ್ನು ಆಟವನ್ನು ಪುನರಾರಂಭಿಸಲು ಹಿಂಜರಿಯುವಂತೆ ಮಾಡಿತು.