ಜಕಾರ್ತಾ: ಆತಿಥೇಯ ಇಂಡೋ ನೇಷ್ಯಾವನ್ನು 16 ಗೋಲುಗಳಿಂದ ಬಗ್ಗುಬಡಿಯುವ ಮೂಲಕ ಭಾರತ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯ ಸೂಪರ್-4 ಹಂತ ತಲುಪುವಲ್ಲಿ ಯಶಸ್ವಿಯಾಗಿದೆ. ಶನಿವಾರದ ಮುಖಾಮುಖಿಯಲ್ಲಿ ಜಪಾನ್ ವಿರುದ್ಧ ಸೆಣಸಲಿದೆ.
ಲೀಗ್ ಹಂತದಲ್ಲಿ ಭಾರತ 2-5 ಅಂತರದಿಂದ ಜಪಾನ್‌ಗೆ ಸೋತಿತ್ತು. ಸೇಡು ತೀರಿಸಿಕೊಳ್ಳುವ ಉತ್ತಮ ಅವಕಾಶವೊಂದು ಭಾರತಕ್ಕೆ ಎದುರಾಗಿದೆ.
ಆದರೆ ಭಾರತದ್ದು ಯುವ ಪಡೆ. ಬರೋಬ್ಬರಿ 12 ಮಂದಿ ಹೊಸಬರಿದ್ದಾರೆ. ಈಗಾಗಲೇ ಮುಂದಿನ ವರ್ಷದ ವಿಶ್ವಕಪ್‌ಗೆ ಅರ್ಹತೆ ಸಂಪಾದಿಸಿದ್ದರಿಂದ ಭಾರತೀಯ ಹಾಕಿ ಪ್ರಯೋಗಾರ್ಥವಾಗಿ ಯುವಕರಿಗೆ ಅವಕಾಶ ನೀಡಿತ್ತು. ಮೊದಲ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ 1-1 ಡ್ರಾ ಸಾಧಿಸಿತ್ತು. ಜಪಾನ್‌ಗೆ ಶರಣಾದ ಬಳಿಕ ಇಂಡೋನೇಷ್ಯಾ ವಿರುದ್ಧ ಗೋಲುಗಳ ಸುರಿಮಳೆಗೈದಿತು. ಅಷ್ಟೇ ಅಲ್ಲ, +1 ಗೋಲು ಅಂತರದಿಂದ ಪಾಕಿಸ್ಥಾನವನ್ನು ಹೊರದಬ್ಬುವಲ್ಲಿಯೂ ಯಶಸ್ವಿಯಾಯಿತು.
ಸೂಪರ್-4 ಹಂತದ ಉಳಿದೆರಡು ತಂಡಗಳೆಂದರೆ ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ. ಇದೊಂದು ರೌಂಡ್ ರಾಬಿನ್ ಮಾದರಿಯ ಹಂತ. ಎಲ್ಲರೂ ಎಲ್ಲರ ವಿರುದ್ಧ ಒಂದೊಂದು ಪಂದ್ಯ ಆಡಲಿದ್ದಾರೆ. ಅಗ್ರ ಸ್ಥಾನ ಪಡೆದ ತಂಡಗಳೆರಡು ಫೈನಲ್‌ಗೆ ಲಗ್ಗೆ ಇಡಲಿವೆ. ಇನ್ನೊಂದು ಪಂದ್ಯದಲ್ಲಿ ಕೊರಿಯಾ -ಮಲೇಷ್ಯಾ ಮುಖಾಮುಖೀ ಆಗಲಿವೆ.
ಪೆನಾಲ್ಟಿ ಗೋಲುಗಳ ವೈಫಲ್ಯ
ಪಾಕಿಸ್ಥಾನವನ್ನು 3-2 ಗೋಲುಗಳಿಂದ ಮಣಿಸಿದ ಜಪಾನ್ ಈ ಕೂಟದ ಬಲಾಡ್ಯ ತಂಡ ಎಂಬುದರಲ್ಲಿ ಅನುಮಾನವಿಲ್ಲ. ಅದು ಎಲ್ಲ ವಿಭಾಗಗಳಲ್ಲೂ ಪರಿಪೂರ್ಣ ಸಾಮರ್ಥ್ಯ ತೋರುತ್ತಿದೆ. ಆದರೆ ಭಾರತ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಭಾರೀ ವೈಫಲ್ಯ ಅನುಭವಿಸುತ್ತಿದೆ. ಇಂಡೋನೇಷ್ಯಾ ವಿರುದ್ಧ ಇಂಥ 22 ಅವಕಾಶ ಲಭಿಸಿದರೂ ಒಂಬತ್ತನ್ನು ಮಾತ್ರ ಗೋಲಾಗಿ ಪರಿವರ್ತಿಸಿತ್ತು.
ಡ್ರ್ಯಾಗ್ ಫ್ಲಿಕರ್ ರೂಪಿಂದರ್‌ಪಾಲ್ ಸಿಂಗ್, ಅಮಿತ್ ರೋಹಿದಾಸ್ ಅವರಂಥ ಸ್ಪೆಷಲಿಸ್ಟ್ ಗಳು ತಂಡದಲ್ಲಿಲ್ಲ. ದಿಪ್ಸನ್ ಟಿರ್ಕಿ ಒಬ್ಬರನ್ನೇ ನಂಬಿಕೊಳ್ಳಬೇಕಿದೆ.
ಭಾರತ ರಕ್ಷಣಾ ವಿಭಾಗವನ್ನುಬಲಗೊ ಳಿಸಿದ ಜಪಾನ್ ಆಕ್ರಮಣವನ್ನು ತಡೆಯ ಬೇಕಿದೆ.