Advertisement

ಏಶ್ಯ ಕಪ್‌ ಹಾಕಿ: ಭಾರತ ಫೈನಲಿಗೆ

12:11 PM Nov 04, 2017 | Team Udayavani |

ಹೊಸದಿಲ್ಲಿ: ಆತಿಥೇಯ ಮತ್ತು ಹಾಲಿ ಚಾಂಪಿಯನ್‌ ಜಪಾನ್‌ ತಂಡವನ್ನು 4-2 ಗೋಲುಗಳಿಂದ ಸೋಲಿಸಿದ ಭಾರತೀಯ ವನಿತಾ ಹಾಕಿ ತಂಡವು ಏಶ್ಯ ಕಪ್‌ ಹಾಕಿ ಕೂಟದ ಫೈನಲ್‌ ಹಂತಕ್ಕೇರಿತು. 

Advertisement

ರವಿವಾರ ನಡೆಯುವ ಫೈನಲ್‌ ಹೋರಾಟದಲ್ಲಿ ಭಾರತವು ಚೀನದ ಸವಾಲನ್ನು ಎದುರಿಸಲಿದೆ. ಇದು 2009ರ ಫೈನಲ್‌ ಹೋರಾಟದ ಪುನರಾವರ್ತನೆಯಾಗಲಿದೆ. 2009ರ ಫೈನಲ್‌ನಲ್ಲಿ ಭಾರತ 3-5 ಗೋಲುಗಳಿಂದ ಸೋತಿತ್ತು. ಈ ಬಾರಿ ಸೇಡು ತೀರಿಸಿಕೊಳ್ಳುವ ಅವಕಾಶ ಭಾರತಕ್ಕೆ ಲಭಿಸಿದೆ. ಭಾರತವು ಲೀಗ್‌ ಹಂತದಲ್ಲಿ ಚೀನವನ್ನು 4-1 ಗೋಲುಗಳಿಂದ ಸೋಲಿಸಿತ್ತು. ಹಾಗಾಗಿ ಭಾರತಕ್ಕೆ ಪ್ರಶಸ್ತಿ ಗೆಲ್ಲಲು ಒಳ್ಳೆಯ ಅವಕಾಶ ಸಿಕ್ಕಿದೆ. ಪ್ರಶಸ್ತಿ ಗೆದ್ದ ತಂಡವು 2018ರಲ್ಲಿ ಇಂಗ್ಲೆಂಡ್‌ನ‌ಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಗಳಿಸಲಿದೆ.

ಗುರ್ಜೀತ್‌ ಕೌರ್‌ (7ನೇ, 9ನೇ) ಅವಳಿ ಗೋಲು ಹೊಡೆದರೆ ನವಜೋತ್‌ ಕೌರ್‌ (9ನೇ) ಮತ್ತು ಲಾಲ್‌ರೆಶ್ಮಿಯಾಮಿ (38ನೇ) ಗೋಲು ಹೊಡೆದ ಇನ್ನಿಬ್ಬರು ಆಟಗಾರ್ತಿಯರಾಗಿದ್ದಾರೆ. ಇವರೆಲ್ಲರ ಉತ್ತಮ ನಿರ್ವಹಣೆಯಿಂದಾಗಿ ಭಾರತ ನಾಲ್ಕನೇ ಬಾರಿ ಫೈನಲಿಗೇರಿತು. 2004ರಲ್ಲಿ  ಪ್ರಶಸ್ತಿ ಜಯಿಸಿದ್ದ ಭಾರತ 1999 ಮತ್ತು 2009ರಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದಿತ್ತು.

ಭಾರತವು ಸಿಂಗಾಪುರ (10-0), ಚೀನ (4-1) ಮತ್ತು ಮಲೇಶ್ಯವನ್ನು 2-0 ಗೋಲುಗಳಿಂದ ಸೋಲಿಸಿ ನಾಕೌಟ್‌ ಹಂತಕ್ಕೇರಿತ್ತು. ಕ್ವಾರ್ಟರ್‌ಫೈನಲ್‌ನಲ್ಲಿ ಭಾರತವು ಕಝಾಕ್‌ಸ್ಥಾನವನ್ನು 7-1 ಗೋಲುಗಳಿಂದ ಭರ್ಜರಿಯಾಗಿ ಉರುಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next