Advertisement

ಏಷ್ಯಾಕಪ್‌ ಹಾಕಿ ಅಜೇಯ ಭಾರತಕ್ಕೆ 3ನೇ ಬಾರಿ ಕಿರೀಟ 

06:30 AM Oct 23, 2017 | Team Udayavani |

ಢಾಕಾ(ಬಾಂಗ್ಲಾದೇಶ): ಶನಿವಾರವಷ್ಟೇ ಪಾಕಿಸ್ತಾನವನ್ನು ಸತತ 2ನೇ ಬಾರಿ ಸೋಲಿಸಿದ್ದ ಉತ್ಸಾಹದಲ್ಲಿದ್ದ ಭಾರತ ಹಾಕಿ ತಂಡಕ್ಕೆ ಭಾನುವಾರ ಮತ್ತೂಂದು ಸಂಭ್ರಮದ ದಿನ. 

Advertisement

ಈ ಬಾರಿಯ ಇಡೀ ಏಷ್ಯಾಕಪ್‌ ಹಾಕಿಯಲ್ಲಿ ವಿಶ್ವದರ್ಜೆಯ ಆಟವನ್ನು ಪ್ರದರ್ಶಿಸಿದ ಭಾರತೀಯರು ಫೈನಲ್‌ನಲ್ಲೂ ಅದೇ ಗುಣಮಟ್ಟವನ್ನು ಪ್ರದರ್ಶಿಸಿದರು. ಸೂಪರ್‌ 4ರ ಹಂತದಲ್ಲಿ ಹೀನಾಯವಾಗಿ ಮಲೇಷ್ಯಾವನ್ನು ಹೊಸಕಿ ಹಾಕಿದ್ದ ಭಾರತದ ಹುಲಿಗಳು ಅಂತಿಮ ಪಂದ್ಯದಲ್ಲಿ ಮತ್ತೂಮ್ಮೆ ಆ ತಂಡದ ವಿರುದ್ಧ ಅಧಿಪತ್ಯ ಸ್ಥಾಪಿಸಿದರು. ಇದರೊಂದಿಗೆ 13 ವರ್ಷದ ನಂತರ ಏಷ್ಯಾಕಪ್‌ ಹಾಕಿ ಕಿರೀಟವನ್ನು ಭಾರತೀಯರು ಎತ್ತಿ ಹಿಡಿದರು. ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಭಾರತ 2-1 ಗೋಲುಗಳಿಂದ ಮಲೇಷ್ಯಾ ತಂಡವನ್ನು ಸೋಲಿಸಿತು. 

ತಂಡದ ಪರ ರಣದೀಪ್‌ ಸಿಂಗ್‌(3ನೇ ನಿಮಿಷ), ಲಲಿತ್‌ ಉಪಾಧ್ಯಾಯ(29ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿದರು. ಮಲೇಷ್ಯಾ ಪರ ಶಹ್ರಿಲ್‌ ಸಾಬಹ (50ನೇ ನಿಮಿಷ) ಏಕೈಕ ಗೋಲು ದಾಖಲಿಸಿದರು.

ಹೊಸ ಕೋಚ್‌ ಆಗಿ ಶೋರ್ಡ್‌ ಮರಿನ್‌ ಆಯ್ಕೆಯಾದ ನಂತರ ಭಾರತಕ್ಕೆ ಸಿಕ್ಕಿದ ಮೊದಲ ಅತ್ಯದ್ಭುತ ಜಯವಿದು. ಈ ಜಯ ಭಾರತ ಮತ್ತೆ ವಿಶ್ವಮಟ್ಟದ ಕೂಟಗಳಲ್ಲಿ ಮಿಂಚು ಸಾಧ್ಯತೆಯನ್ನು ತೆರೆದಿರಿಸಿದೆ. ಅ-17 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹಲವು ಆಟಗಾರರು ಇರುವುದೇ ಈ ಯಶಸ್ಸಿನ ಕಾರಣಗಳಲ್ಲೊಂದಾಗಿದೆ.

ಆರಂಭದಲ್ಲೇ ಗೋಲ್‌ ಸಿಡಿಸಿದ ರಣದೀಪ್‌: ಪಂದ್ಯಕ್ಕೂ ಮುನ್ನವೇ ಭಾರತ ಕೂಟದಲ್ಲಿ ಒಂದೂ ಪಂದ್ಯವನ್ನು ಸೋಲದೇ ಉತ್ಸಾಹದಲ್ಲಿತ್ತು. ಪಂದ್ಯ ಆರಂಭವಾಗಿ 3ನೇ ನಿಮಿಷದಲ್ಲಿಯೇ ರಣದೀಪ್‌ ಸಿಂಗ್‌ ಆಕರ್ಷಕವಾಗಿ ಗೋಲು ಸಿಡಿಸಿದರು. ಹೀಗಾಗಿ ಆರಂಭಿಕ ಹಂತದಲ್ಲಿಯೇ ಭಾರತ 1-0 ಗೋಲುಗಳಿಂದ ಮುನ್ನಡೆ ಪಡೆಯಿತು. 

Advertisement

ಇದೇ ಆತ್ಮವಿಶ್ವಾಸದಲ್ಲಿಯೇ ಆಡುತ್ತಿದ್ದ ಭಾರತ ನಂತರದ ಹಂತದಲ್ಲಿ ರಕ್ಷಣೆಗೆ ಹೆಚ್ಚಿನ ಒತ್ತನ್ನು ನೀಡಿತು. ಅತ್ತ ಮಲೇಷ್ಯಾ ಕೆಲವು ಬಾರಿ ಗೋಲು ಬಾರಿಸಲು ಮುಂದಾದರೂ ಅದಕ್ಕೆ ಭಾರತೀಯರು ಅವಕಾಶ ನೀಡಲಿಲ್ಲ. ಇನ್ನೇನು ಮೊದಲ ಅವಧಿಯ ಅಂತ್ಯವಾಗುತ್ತೆ ಅನ್ನುವ ಸಮಯದಲ್ಲಿಯೇ ಲಲಿತ್‌ ಉಪಾಧ್ಯಾಯ ಗೋಲು ಬಾರಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿದರು. ಇದೇ ಹಂತದಲ್ಲಿ ಮೊದಲ ಅವಧಿ ಅಂತ್ಯವಾಯಿತು.

2ನೇ ಅವಧಿಯಲ್ಲಿ ಆತಂಕದ ವಾತಾವರಣ:
ಎರಡನೇ ಅವಧಿಯ ಆರಂಭದಲ್ಲಿ ಯಾವುದೇ ಗೋಲು ದಾಖಲಾಗದೇ ಪಂದ್ಯ ಹಾಗೆಯೇ ಸಾಗುತ್ತಿತ್ತು. ಆದರೆ 50ನೇ ನಿಮಿಷದಲ್ಲಿ ಮಲೇಷ್ಯಾದ ಶಹ್ರಿಲ್‌ ಸಾಬಹ ಗೋಲು ದಾಖಲಿಸಿದರು. ಹೀಗಾಗಿ ಪಂದ್ಯದಲ್ಲಿ ಸ್ವಲ್ಪ ಆತಂಕದ ವಾತಾವರಣವಿತ್ತು. ಆ ನಂತರ ಮಲೇಷ್ಯಾ ಆಟಗಾರರು ಗೋಲು ಬಾರಿಸಲು ಯತ್ನಿಸಿದರೂ ಭಾರತೀಯರು ಅವಕಾಶ ನೀಡಲಿಲ್ಲ. ಇತ್ತ ಭಾರತ ಕೂಡ ಗೋಲು ಬಾರಿಸಿ ಅಂತರಿಸಲು ವಿಸ್ತರಿಸಲು ಯತ್ನಿಸಿ ವಿಫ‌ಲವಾಯಿತು. ಅಂತಿಮವಾಗಿ ಭಾರತ 2-1ರಿಂದ ಗೆದ್ದು ಪ್ರಶಸ್ತಿ ಪಡೆಯಿತು. ಮಲೇಷ್ಯಾ ರನ್ನರ್‌ ಪ್ರಶಸ್ತಿ ಪಡೆದರೆ, ಪಾಕಿಸ್ತಾನ ತೃತೀಯ ಸ್ಥಾನ ಪಡೆದಿದೆ.

ಮಲೇಷ್ಯಾ ವಿರುದ್ಧ 2ನೇ ಜಯ: ಈ ಕೂಟದಲ್ಲಿ ಭಾರತ ಮಲೇಷ್ಯಾವಿರುದ್ಧ 2ನೇ ಗೆಲುವು ಸಾಧಿಸಿದೆ. ಇದಕ್ಕೂ ಮುನ್ನ ಸೂಪರ್‌ 4ರ ಹಂತದಲ್ಲಿ ಭಾರತ ತಂಡ 6-2 ಗೋಲುಗಳಿಂದ ಮಲೇಷ್ಯಾ ತಂಡವನ್ನು ಸೋಲಿಸಿತ್ತು. ಆ ಪಂದ್ಯದಲ್ಲಿ ಭಾರತದ ಪರ ಆಕಾಶ್‌ದೀಪ್‌ ಸಿಂಗ್‌, ಹರ್ಮನ್‌ಪ್ರೀತ್‌ ಸಿಂಗ್‌, ಎಸ್‌.ಕೆ.ಉತ್ತಪ್ಪ, ಗುರ್ಜಂತ್‌, ಎಸ್‌.ವಿ.ಸುನೀಲ್‌, ಸರ್ದಾರ್‌ ಸಿಂಗ್‌ ತಲಾ ಒಂದು ಗೋಲು ಸಿಡಿಸಿದ್ದರು.

ಸೋಲನ್ನೇ ಕಾಣದ ಅಜೇಯ ಭಾರತ
ಪ್ರಸಕ್ತ ಏಷ್ಯಾಕಪ್‌ ಹಾಕಿಯಲ್ಲಿ ಭಾರತ ಸೋಲನ್ನೇ ಕಂಡಿಲ್ಲ. ಸೂಪರ್‌ 4ರ ಹಂತದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಡ್ರಾ ಸಾಧಿಸಿದ್ದೊಂದೇ ಭಾರತದ ಕಳಪೆ ಪ್ರದರ್ಶನ. ಉಳಿದಂತೆ ಪಾಕಿಸ್ತಾನವನ್ನು 2 ಬಾರಿ, ಮಲೇಷ್ಯಾವನ್ನು 2 ಬಾರಿ ಸೋಲಿಸಿದೆ. ಜಪಾನ್‌, ಬಾಂಗ್ಲಾದೇಶ ವಿರುದ್ಧ ತಲಾ ಒಂದು ಪಂದ್ಯದಲ್ಲಿ ಗೆಲುವು ಪಡೆದಿದೆ. ಗೆದ್ದ ಅಷ್ಟೂ ಪಂದ್ಯಗಳಲ್ಲಿ ಎದುರಾಳಿಗಳನ್ನು ಧೂಳೀಪಟವೆಬ್ಬಿಸಿದೆ.

ಭಾರತಕ್ಕೆ 3ನೇ ಬಾರಿಗೆ ಏಷ್ಯಾಕಪ್‌ ಪ್ರಶಸ್ತಿ
ಫೈನಲ್‌ನಲ್ಲಿ ಮಲೇಷ್ಯಾ ತಂಡವನ್ನು ಸೋಲಿಸುವ ಮೂಲಕ ಭಾರತ 3ನೇ ಬಾರಿಗೆ ಏಷ್ಯಕಪ್‌ ಹಾಕಿ ಪ್ರಶಸ್ತಿ ಪಡೆದಿದೆ. ಇದಕ್ಕೂ ಮುನ್ನ ಭಾರತ 2003ರಲ್ಲಿ ಮತ್ತು 2007ರಲ್ಲಿ ಪ್ರಶಸ್ತಿ ಪಡೆದಿತ್ತು. 2003ರಲ್ಲಿ 4-2ರಿಂದ ಪಾಕಿಸ್ತಾನವನ್ನು ಸೋಲಿಸಿ  ಪ್ರಶಸ್ತಿ ಗೆದ್ದಿದ್ದರೆ, 2007ರಲ್ಲಿ ಭಾರತ 7-2ರಿಂದ ಬಲಿಷ್ಠ ದಕ್ಷಿಣ ಕೊರಿಯಾ ತಂಡವನ್ನು ಸೋಲಿಸಿ ಪ್ರಶಸ್ತಿ ಮೇಲೆ ಕೈಯಿಟ್ಟಿತ್ತು. ಭಾರತ ಒಟ್ಟು 8 ಬಾರಿ ಫೈನಲ್‌ ಪ್ರವೇಶಿಸಿದೆ. ಅದರಲ್ಲಿ 5 ಬಾರಿ ರನ್ನರ್‌ ಅಪ್‌ ಪ್ರಶಸ್ತಿ ಪಡೆದಿದೆ. ಒಟ್ಟಾರೆ ದಕ್ಷಣ ಕೊರಿಯಾ ಗರಿಷ್ಠ ಬಾರಿ (4 ) ಪ್ರಶಸ್ತಿ ಪಡೆದಿದೆ. ಉಳಿದಂತೆ ಭಾರತ ಮತ್ತು ಪಾಕಿಸ್ತಾನ ತಂಡಗಳು ತಲಾ 3 ಬಾರಿ ಪ್ರಶಸ್ತಿ ಪಡೆದು 2ನೇ ಸ್ಥಾನದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next