ಕೊಲಂಬೊ: ಕೋವಿಡ್ ಹಾವಳಿ ಯಿಂದಾಗಿ ಶ್ರೀಲಂಕಾ ಆತಿಥ್ಯದ ಏಶ್ಯ ಕಪ್ ಪಂದ್ಯಾವಳಿಯನ್ನು ರದ್ದುಗೊಳಿಸಲಾಗಿದೆ. ಇದು ಮುಂದಿನ ವರ್ಷ ಪಾಕಿಸ್ಥಾನದಲ್ಲಿ ನಡೆಯುವ ಸಾಧ್ಯತೆ ಇದೆ. ಹಾಗೆಯೇ ಶ್ರೀಲಂಕಾ 2023ರ ಏಶ್ಯ ಕಪ್ ಕೂಟದ ಆತಿಥ್ಯದ ಹಕ್ಕನ್ನು ತನ್ನಲ್ಲಿ ಕಾಯ್ದಿರಿಸಿಕೊಂಡಿದೆ.
ಈ ಬಾರಿಯ ಪಂದ್ಯಾವಳಿಯನ್ನು 50 ಓವರ್‌ಗಳ ಬದಲು ಟಿ20 ಮಾದರಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ವರ್ಷಾಂತ್ಯದ ಟಿ20 ವಿಶ್ವಕಪ್ ಪಂದ್ಯಾವಳಿಗೆ ಅಭ್ಯಾಸವಾಗಲಿ ಎಂಬುದು ಇದರ ಉದ್ದೇಶವಾಗಿತ್ತು.
ಕಳೆದ ವರ್ಷ ಪಾಕಿಸ್ಥಾನದಲ್ಲಿ ಈ ಏಶ್ಯ ಕಪ್ ಟೂರ್ನಿ ನಡೆಯಬೇಕಿತ್ತು. ಆದರೆ ಕೋವಿಡ್ ಮತ್ತು ಭಾರತ ಹಿಂದೆ ಸರಿದ ಕಾರಣದಿಂದ ಇದನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲಾಯಿತು. ಈ ವರ್ಷ ಮತ್ತೆ ಕೊರೊನಾ ತೀವ್ರಗೊಂಡಿದೆ. ಹೀಗಾಗಿ ಶ್ರೀಲಂಕಾ ಬುಧವಾರವಷ್ಟೇ ಈ ಪಂದ್ಯಾವಳಿಯನ್ನು ರದ್ದುಗೊಳಿಸಲು ತೀರ್ಮಾನಿಸಿತು.
ಪಾಕಿಸ್ಥಾನ ವಿಶ್ವಾಸ :
ಆದರೆ ಇದನ್ನು ಅಧಿಕೃತವಾಗಿ ರದ್ದುಗೊಳಿಸುವ ಬದಲು ಮುಂದಿನ ವರ್ಷ ಪಾಕಿಸ್ಥಾನದಲ್ಲಿ ನಡೆಸಲು ಪ್ರಯತ್ನಿಸಲಾಗುವುದು ಎಂದು ಪಿಸಿಬಿ ಚೇರ್ಮನ್ ಎಹಸಾನ್ ಮಣಿ ಹೇಳಿದ್ದಾರೆ. ವೇಳಾಪಟ್ಟಿಯಂತೆ 2023ರಲ್ಲಿ ಶ್ರೀಲಂಕಾ ಆತಿಥ್ಯದಲ್ಲಿ ಮತ್ತೂಂದು ಏಶ್ಯ ಕಪ್ ಟೂರ್ನಿ ನಡೆಯಬೇಕಿದೆ. ಇದರ ಹಕ್ಕನ್ನು ಲಂಕಾ ತನ್ನಲ್ಲೇ ಕಾಯ್ದಿರಿಸಿದೆ.
ಕೊನೆಯ ಸಲ ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆದದ್ದು 2018ರಲ್ಲಿ. ಯುಎಇ ಇದರ ಆತಿಥ್ಯ ವಹಿಸಿತ್ತು. ಭಾರತ ಕಳೆದೆರಡು ಬಾರಿಯ ಚಾಂಪಿಯನ್ ಎಂಬುದನ್ನು ಮರೆಯುವಂತಿಲ್ಲ.