Advertisement

Asia Cup; ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ನಾಲ್ಕು ಬದಲಾವಣೆ ಸಾಧ್ಯತೆ

11:58 AM Sep 15, 2023 | Team Udayavani |

ಕೊಲಂಬೊ: ಈಗಾಗಲೇ ಏಷ್ಯಾ ಕಪ್ ಕೂಟದ ಫೈನಲ್ ತಲುಪಿರುವ ಟೀಂ ಇಂಡಿಯಾ ಇಂದು ಸೂಪರ್ ಫೋರ್ ಸುತ್ತಿನ ಅಂತಿಮ ಪಂದ್ಯವಾಡುತ್ತಿದೆ. ಈಗಾಗಲೇ ಫೈನಲ್ ರೇಸ್ ನಿಂದ ಹೊರಬಿದ್ದಿರುವ ಬಾಂಗ್ಲಾದೇಶವು ರೋಹಿತ್ ಪಡೆಗೆ ಎದುರಾಗಲಿದೆ.

Advertisement

ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಇಂದಿನ ಪಂದ್ಯ ನಡೆಯಲಿದೆ. ಮತ್ತೊಂದು ಜಯದೊಂದಿಗೆ ಫೈನಲ್ ಗೆ ವಿಶ್ವಾಸದ ಹೆಜ್ಜೆಯಿಡಲು ಟೀಂ ಇಂಡಿಯಾ ಯೋಜಿಸುತ್ತಿದ್ದರೆ, ಕೊನೆಯ ಪಂದ್ಯದಲ್ಲಾದರೂ ಗೆದ್ದು ಢಾಕಾ ವಿಮಾನ ಹತ್ತಲು ಶಕೀಬ್ ಬಳಗ ಮುಂದಾಗಿದೆ.

ಇಂದಿನ ಪಂದ್ಯವು ಕೂಟದ ದೃಷ್ಟಿಯಲ್ಲಿ ಅಷ್ಟೊಂದು ಮಹತ್ವ ಪಡೆಯದ ಕಾರಣ ಹಲವು ಬದಲಾವಣೆಗೆ ರೋಹಿತ್ ಮುಂದಾಗಿದ್ದಾರೆ ಎನ್ನಲಾಗಿದೆ. ಶ್ರೀಲಂಕಾ ವಿರುದ್ಧ ಆಡಿದ ತಂಡದಲ್ಲಿ ನಾಲ್ಕು ಅಥವಾ ಐವರು ಇಂದು ಆಡುವುದು ಅನುಮಾನ ಎನ್ನಲಾಗಿದೆ.

ಇದುವರೆಗೆ ಕೂಟದಲ್ಲಿ ನಾಲ್ಕು ಪಂದ್ಯವಾಡಿದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಗೆ ಇಂದು ವಿಶ್ರಾಂತಿ ನೀಡಲು ತಂಡದ ಮ್ಯಾನೇಜ್ ಮೆಂಟ್ ಮುಂದಾಗಿದೆ. ಅವರ ಬದಲಿಗೆ ಮೊಹಮ್ಮದ್ ಶಮಿ ಮತ್ತು ಪ್ರಸಿಧ್ ಕೃಷ್ಣ ಅವಕಾಶ ಪಡೆಯಬಹುದು.

ಅಲ್ಲದೆ ಕಳೆದ ಪಂದ್ಯದಲ್ಲಿ ಆಡಿರದ ಶಾರ್ದೂಲ್ ಠಾಕೂರ್ ಇಂದು ಅವಕಾಶ ಪಡೆಯಬಹುದು. ಲಂಕಾ ವಿರುದ್ಧ ಅಕ್ಷರ್ ಪಟೇಲ್ ಅವರು ಠಾಕೂರ್ ಬದಲಿಗೆ ಆಡಿದ್ದರು. ಇಂದಿನ ಪಂದ್ಯದಲ್ಲಿ ಉಪನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಿ ಠಾಕೂರ್ ಆಡಬಹುದು ಎಂದು ವರದಿಯಾಗಿದೆ.

Advertisement

ಈ ಮೂವರಲ್ಲದೆ ಒಂದೂ ಪಂದ್ಯದಲ್ಲಿ ಅವಕಾಶ ಪಡೆಯದ ಸೂರ್ಯ ಕುಮಾರ್ ಯಾದವ್ ಇಂದು ಆಡುವ ಬಳಗಕ್ಕೆ ಎಂಟ್ರಿ ನೀಡಬಹುದು. ಅವರಿಗಾಗಿ ಓರ್ವ ಬ್ಯಾಟರ್ ಗೆ ವಿಶ್ರಾಂತಿ ನೀಡಬಹುದು. ಬಹುತೇಕ ವಿರಾಟ್ ಕೊಹ್ಲಿಗೆ ರೆಸ್ಟ್ ನೀಡಿ ಸೂರ್ಯ ಆಡಿಸಬಹುದು ಎನ್ನಲಾಗಿದೆ.

ಬೆನ್ನು ನೋವಿಗೆ ಒಳಾಗಾಗಿರುವ ಶ್ರೇಯಸ್ ಅಯ್ಯರ್ ಇಂದು ಕೂಡಾ ಆಡುವುದು ಕಷ್ಟ. ಗುರುವಾರ ಅವರು ಅಭ್ಯಾಸದಲ್ಲಿ ತೊಡಗಿದ್ದರೂ ಏಷ್ಯಾ ಕಪ್ ನಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

ಮುಶ್ಫಿಕರ್‌ ರಹೀಂ ಇಲ್ಲ: ಬಾಂಗ್ಲಾದೇಶದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆಗಿರುವ ಮುಶ್ಫಿಕರ್‌ ರಹೀಂ ಅವರು ಭಾರತ ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ. ಶ್ರೀಲಂಕಾ ವಿರುದ್ಧದ ಸೂಪರ್‌ ಫೋರ್‌ ಪಂದ್ಯದ ಬಳಿಕ ಅವರು ತವರಿಗೆ ಮರಳಿದ್ದಾರೆ. ರಹೀಂ ಅವರ ಅನುಪಸ್ಥಿತಿಯಲ್ಲಿ ಲಿಟನ್‌ ದಾಸ್‌ ವಿಕೆಟ್‌ ಹಿಂದುಗಡೆ ಕರ್ತವ್ಯ ನಿಭಾಯಿಸುವ ನಿರೀಕ್ಷೆಯಿದೆ. ಇದೇ ವೇಳೆ ನಾಯಕ ಶಕಿಬ್‌ ಅಲ್‌ ಹಸನ್‌ ತಂಡವನ್ನು ಸೇರಿಕೊಂಡಿದ್ದು ಭಾರತ ವಿರುದ್ಧ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next