ಕೊಲಂಬೊ: ಇಲ್ಲಿನ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಇಂದು ಏಷ್ಯಾಕಪ್ ನ ಫೈನಲ್ ನಲ್ಲಿ ಶ್ರೀಲಂಕಾವನ್ನು ಎದುರಿಸುವ ಮೂಲಕ ಭಾರತೀಯ ಕ್ರಿಕೆಟ್ ತಂಡವು ದಾಖಲೆಯ 8 ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.
ಏಷ್ಯಾಕಪ್ ನ ಇತಿಹಾಸದಲ್ಲಿ ಭಾರತವು ಏಳು ಪ್ರಶಸ್ತಿಗಳೊಂದಿಗೆ ಅತ್ಯಂತ ಯಶಸ್ವಿ ತಂಡವಾಗಿದೆ. ಆದರೆ ಬಾಂಗ್ಲಾದೇಶದ ವಿರುದ್ಧದ ಸೂಪರ್ ಫೋರ್ ನ ಅಂತಿಮ ಸೂಪರ್ 4 ಪಂದ್ಯದಲ್ಲಿ ಸೋತ ಭಾರತವು ಸ್ವಲ್ಪಮಟ್ಟಿಗೆ ಹಿನ್ನಡೆ ಅನುಭವಿಸಿದೆ. ಮತ್ತೊಂದೆಡೆ ಶ್ರೀಲಂಕಾ ತಂಡವು ಪಾಕಿಸ್ತಾನ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿದೆ.
ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಭಾರತವು ತಮ್ಮ ಮೊದಲ ಆಯ್ಕೆಯ ಆಟಗಾರರಿಗೆ ವಿಶ್ರಾಂತಿ ನೀಡಿತ್ತು. ಈ ಪಂದ್ಯಕ್ಕಾಗಿ ಐದು ಬದಲಾವಣೆ ಮಾಡಿಕೊಂಡಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಬಲಿಷ್ಠ ತಂಡವನ್ನು ಕಣಕ್ಕಿಳಿಸಲಿದೆ.
ಫೈನಲ್ ಪಂದ್ಯ ನಡೆಯುವ ವೇಳೆ ಕೊಲಂಬೊದಲ್ಲಿ ಮಳೆ ಬರುವ ಸಾಧ್ಯತೆಯಿದೆ. ಈ ಹಿಂದಿನ ಪಂದ್ಯಗಳಿಗೆ ನಡೆದಂತೆ ಫೈನಲ್ ಹಣಾಹಣಿಗೂ ಮಳೆ ಅಡ್ಡಿಯಾಗುವ ನಿರೀಕ್ಷೆಯಿದೆ. ಆದರೆ ಫೈನಲ್ ಪಂದ್ಯಕ್ಕೆ ರಿಸರ್ವ್ ದಿನದ ಅವಕಾಶ ನೀಡಲಾಗಿದೆ. ಒಂದು ವೇಳೆ ರವಿವಾರ ಮಳೆ ಬಂದು ರದ್ದಾದರೆ ಸೋಮವಾರ ಪಂದ್ಯ ಮುಂದುವರಿಯಲಿದೆ. ಸೋಮವಾರವೂ ಮಳೆ ಅಡ್ಡಿಪಡಿಸಿದರೆ ಉಭಯ ತಂಡಗಳು ಟ್ರೋಫಿ ಹಂಚಿಕೊಳ್ಳಲಿದೆ.
ಇದನ್ನೂ ಓದಿ:Parliament Session; ನೂತನ ಸಂಸತ್ ಭವನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ ಉಪ ರಾಷ್ಟ್ರಪತಿ
ಭಾರತದ ಆಲ್‌ರೌಂಡರ್ ಅಕ್ಷರ್ ಪಟೇಲ್ ಫೈನಲ್‌ನಿಂದ ಹೊರಗುಳಿದಿದ್ದು, ಅವರ ಬದಲಿಗೆ ವಾಷಿಂಗ್ಟನ್ ಸುಂದರ್ ತಂಡದಲ್ಲಿ ಕವರ್ ಆಗಿ ಕಾಣಿಸಿಕೊಂಡಿದ್ದಾರೆ.
ಮತ್ತೊಂದೆಡೆ, 11ನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿರುವ ಶ್ರೀಲಂಕಾ ತಂಡಕ್ಕೂ ಗಾಯದ ಸಮಸ್ಯೆ ಕಾಣಿಸಿದೆ. ಸ್ಪಿನ್ನರ್ ಮಹೀಶ ತೀಕ್ಷಣ ಗಾಯಗೊಂಡಿದ್ದು, ಫೈನಲ್ ಗೆ ಅಲಭ್ಯರಾಗಲಿದ್ದಾರೆ.