ಕೊಲಂಬೊ: ಶುಕ್ರವಾರ ಬಾಂಗ್ಲಾದೇಶ ವಿರುದ್ಧದ ಸೂಪರ್ ಫೋರ್ ಪಂದ್ಯದಲ್ಲಿ ಸೋಲನುಭವಿಸಿದರೂ ಏಷ್ಯಾ ಕಪ್ ಕೂಟದ ಫೈನಲ್ ಗೆ ಟೀಂ ಇಂಡಿಯಾ ಅರ್ಹತೆ ಪಡೆದಿದೆ. ರವಿವಾರ ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿದೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಲ್ ರೌಂಡರ್ ಅಕ್ಷರ್ ಪಟೇಲ್ ಗಾಯಗೊಂಡಿದ್ದಾರೆ. ತಂಡಕ್ಕೆ ಜಯ ಒದಗಿಸಲು ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದ ಅಕ್ಷರ್ ಪಟೇಲ್ ತನ್ನ ಮೊಣಕೈ, ಕೈಗೆ ಏಟು ಮಾಡಿಕೊಂಡಿದ್ದರು. ಅಲ್ಲದೆ ಓಡುವಾಗ ಸ್ನಾಯು ಸೆಳೆತಕ್ಕೂ ಒಳಗಾಗಿದ್ದರು.
ಏಷ್ಯಾ ಕಪ್ ಫೈನಲ್ ಪಂದ್ಯದಿಂದ ಅಕ್ಷರ್ ಪಟೇಲ್ ಅವರು ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ. ಅವರ ಬದಲಿಗೆ ವಾಷಿಂಗ್ಟನ್ ಸುಂದರ್ ಅವರು ತಂಡ ಸೇರಿದ್ದಾರೆ.
ಇದನ್ನೂ ಓದಿ:NIA Raids: ಉಗ್ರ ತರಬೇತಿ ಶಂಕೆ… ತಮಿಳುನಾಡು, ತೆಲಂಗಾಣ ಸೇರಿ 30 ಸ್ಥಳಗಳಲ್ಲಿ NIA ದಾಳಿ
ವಾಷಿಂಗ್ಟನ್ ಸುಂದರ್ ಅವರು ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸುತ್ತಿರುವ ಭಾರತೀಯ ತಂಡದ ಭಾಗವಾಗಿದ್ದಾರೆ. ಸದ್ಯ ಕೊಲಂಬೊಗೆ ತೆರಳಿರುವ ಅವರು ಫೈನಲ್ ನ ನಂತರ ಬೆಂಗಳೂರಿನಲ್ಲಿ ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.
ತಮಿಳುನಾಡಿನ ಆಲ್ ರೌಂಡರ್ ವಾಷಿಂಗ್ಟನ್ ಭಾರತದ ಪರವಾಗಿ 16 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, 29.12 ಸರಾಸರಿಯಲ್ಲಿ 233 ರನ್ ಗಳಿಸಿ 16 ವಿಕೆಟ್ ಪಡೆದಿದ್ದಾರೆ.