ಲಾಹೋರ್: ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿಯೂ 2 ರನ್ ಅಂತರದ ಸೋಲನುಭವಿಸಿದ ಅಫ್ಘಾನಿ ಸ್ಥಾನ ಏಷ್ಯಾ ಕಪ್ ಪಂದ್ಯಾವಳಿಯಿಂದ ಹೊರಬಿದ್ದಿದೆ. “ಬಿ’ ವಿಭಾಗದಿಂದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೂಪರ್-4 ಹಂತಕ್ಕೆ ಪ್ರವೇಶ ಪಡೆದಿವೆ.
ಮಂಗಳವಾರದ ಕೊನೆಯ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ 8 ವಿಕೆಟಿಗೆ 291 ರನ್ ಗಳಿಸಿದರೆ, ಅಮೋಘ ರೀತಿಯಲ್ಲಿ ಬೆನ್ನಟ್ಟಿಕೊಂಡು ಬಂದ ಅಫ್ಘಾನ್ ಪಡೆ 37.4 ಓವರ್‌ಗಳಲ್ಲಿ 289ಕ್ಕೆ ಆಲೌಟ್ ಆಯಿತು.
ಲಾಹೋರ್ ಟ್ರ್ಯಾಕ್‌ನಲ್ಲಿ ರನ್ ಸರಾಗವಾಗಿ ಹರಿದು ಬರುವ ಕಾರಣ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡಿತು. ಇದರಲ್ಲಿ ಯಶಸ್ಸನ್ನೂ ಕಂಡಿತು. ಆರಂಭಿಕರಾದ ಪಥುಮ್ ನಿಸ್ಸಂಕ (41) ಮತ್ತು ದಿಮುತ್ ಕರುಣಾರತ್ನೆ (32) 10.2 ಓವರ್‌ಗಳನ್ನು ನಿಭಾಯಿಸಿ 63 ರನ್ ಒಟ್ಟುಗೂಡಿಸಿದರು. ಆದರೆ ಸದೀರ ಸಮರವಿಕ್ರಮ (3) ಬೇಗನೇ ವಾಪಸಾದರು. 23 ರನ್ ಅಂತರದಲ್ಲಿ 3 ವಿಕೆಟ್ ಬಿತ್ತು.
ಈ ಹಂತದಲ್ಲಿ ಕುಸಲ್ ಮೆಂಡಿಸ್ (92) ಮತ್ತು ಚರಿತ ಅಸಲಂಕ (38) ಅಫ್ಘಾನ್ ದಾಳಿಗೆ ಸಡ್ಡು ಹೊಡೆದು ನಿಂತರು. 4ನೇ ವಿಕೆಟಿಗೆ 102 ರನ್ ಒಟ್ಟುಗೂಡಿಸಿ ಬೃಹತ್ ಮೊತ್ತದ ಸೂಚನೆಯಿತ್ತರು. 40ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಮೆಂಡಿಸ್ 84 ಎಸೆತ ನಿಭಾಯಿಸಿ ಸೊಗಸಾದ ಇನ್ನಿಂಗ್ಸ್ ಕಟ್ಟಿದರು (8 ಫೋರ್, 3 ಸಿಕ್ಸರ್). ಆದರೆ ಶತಕ ಸಮೀಪಿಸುವಾಗ ರನೌಟ್ ಸಂಕಟಕ್ಕೆ ಸಿಲುಕಿದರು.
40 ಓವರ್ ಅಂತ್ಯಕ್ಕೆ ಶ್ರೀಲಂಕಾ 7 ವಿಕೆಟಿಗೆ 226 ರನ್ ಗಳಿಸಿತ್ತು. ಆಗ ದುನಿತ್ ವೆಲ್ಲಲಗೆ (ಅಜೇಯ 33) ಮತ್ತು ಮಹೀಶ್ ತೀಕ್ಷಣ (28) ಸಿಡಿದು ನಿಂತರು. ಕೊನೆಯ 10 ಓವರ್‌ಗಳನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದ ಈ ಜೋಡಿ 8ನೇ ವಿಕೆಟಿಗೆ 64 ಒಟ್ಟುಗೂಡಿಸಿತು.
ಅಫ್ಘಾನಿಸ್ಥಾನ ಪರ ಗುಲ್ಬದಿನ್ ನೈಬ್ 4, ರಶೀದ್ ಖಾನ್ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ-8 ವಿಕೆಟಿಗೆ 291 (ಮೆಂಡಿಸ್ 92, ನಿಸ್ಸಂಕ 41, ಅಸಲಂಕ 36, ವೆಲ್ಲಲಗೆ ಔಟಾಗದೆ 33, ಕರುಣಾರತ್ನೆ 32, ತೀಕ್ಷಣ 28, ನೈಬ್ 60ಕ್ಕೆ 4, ರಶೀದ್ ಖಾನ್ 63ಕ್ಕೆ 2). ಅಫ್ಘಾನಿಸ್ಥಾನ-37.4 ಓವರ್‌ಗಳಲ್ಲಿ 289 (ನಬಿ 65, ಶಾಹಿದಿ 59, ರಜಿತ 79ಕ್ಕೆ 4, ಧನಂಜಯ 12ಕ್ಕೆ 2, ವೆಲ್ಲಲಗೆ 36ಕ್ಕೆ 2).