ಕೊಲಂಬೊ: ಭಾರತದ ವಿರುದ್ಧ ನಡೆದ ಸೂಪರ್ ಫೋರ್ ಪಂದ್ಯದಲ್ಲಿ ಮಕಾಡೆ ಮಲಗಿದ ಪಾಕಿಸ್ತಾನ ತಂಡಕ್ಕೆ ಗಾಯಾಳುಗಳ ಸಮಸ್ಯೆಯು ಇದೀಗ ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿ ತಂದಿದೆ. ಭಾರತದ ವಿರುದ್ದ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಪ್ರಮುಖ ಇಬ್ಬರು ಬೌಲರ್ ಗಳು ಗಾಯಗೊಂಡಿದ್ದು, ವಿಶ್ವಕಪ್ ಗೆ ಮೊದಲು ಬಾಬರ್ ಪಡೆಗೆ ತಲೆನೋವಾಗಿ ಪರಿಣಮಿಸಿದೆ.
ತಂಡದ ಪ್ರಮುಖ ಬೌಲರ್ ಗಳಾದ ನಸೀಂ ಶಾ ಮತ್ತು ಹ್ಯಾರಿಸ್ ರೌಫ್ ಭಾರತದ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದರು. ರವಿವಾರದ ಆಟದ ವೇಳೆ ಐದು ಓವರ್ ಎಸೆದಿದ್ದ ರೌಫ್, ಮೀಸಲು ದಿನವಾದ ಸೋಮವಾರದ ಆಟಕ್ಕೆ ಮೈದಾನಕ್ಕಿಳಿಯಲಿಲ್ಲ. ಮತ್ತೊಂದೆಡೆ ಬೌಲಿಂಗ್ ಮಾಡುತ್ತಿದ್ದ ನಸೀಂ ಶಾ ತನ್ನ ಕೊನೆಯ ಓವರ್ ನಲ್ಲಿ ಮಧ್ಯದಲ್ಲೇ ಮೈದಾನಿಂದ ಹೊರ ನಡೆದರು. ಇಬ್ಬರೂ ಬ್ಯಾಟಿಂಗ್ ಗೆ ಆಗಮಿಸಲಿಲ್ಲ.
ಇದನ್ನೂ ಓದಿ:VK Singh: ಕೆಲವೇ ವರ್ಷಗಳಲ್ಲಿ ಪಿಒಕೆ ಭಾರತದೊಂದಿಗೆ ವಿಲೀನಗೊಳ್ಳಲಿದೆ: ವಿ.ಕೆ.ಸಿಂಗ್
ಇದೀಗ ಮುನ್ನೆಚ್ಚರಿಕೆಯ ಕ್ರಮವಾಗಿ ಇಬ್ಬರು ಬೌಲರ್ ಗಳನ್ನು ಬ್ಯಾಕಪ್ ಆಟಗಾರರಾಗಿ ಕರೆಸಲಾಗಿದೆ. ಶಹನವಾಜ್ ದಹಾನಿ ಮತ್ತು ಜಮಾನ್ ಖಾನ್ ಅವರು ಪಾಕ್ ಏಷ್ಯಾ ಕಪ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಪಾಕಿಸ್ತಾನವು ಗುರುವಾರ ಶ್ರೀಲಂಕಾ ವಿರುದ್ಧ ತನ್ನ ಕೊನೆಯ ಸೂಪರ್ ಫೋರ್ ಪಂದ್ಯ ಆಡಲಿದೆ. ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ನಸೀಂ ಮತ್ತು ರೌಫ್ ಇಬ್ಬರೂ ಆ ಪಂದ್ಯದ ಸಮಯಕ್ಕೆ ಚೇತರಿಸಿಕೊಳ್ಳುತ್ತಾರೆ ಎಂದು ತಂಡದ ಮ್ಯಾನೇಜ್ ಮೆಂಟ್ ಗೆ ಭರವಸೆಯಿದ್ದರೂ, ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಕೆಲವೇ ವಾರಗಳಲ್ಲಿ ಪ್ರಾರಂಭವಾಗುವ ಕಾರಣ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿರದ ಕಾರಣ ಇಬ್ಬರು ವೇಗಿಗಳನ್ನು ಸೇರ್ಪಡೆ ಮಾಡಿಕೊಂಡಿದೆ.
“ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಗೆ ಮುಂಚಿತವಾಗಿ ಆಟಗಾರರ ಫಿಟ್‌ನೆಸ್ ಮತ್ತು ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಇದು ಮುನ್ನೆಚ್ಚರಿಕೆ ಕ್ರಮವಾಗಿದೆ. ಇಬ್ಬರೂ ತಂಡದ ವೈದ್ಯಕೀಯ ಸಮಿತಿಯ ಮೇಲ್ವಿಚಾರಣೆಯಲ್ಲಿ ಮುಂದುವರಿಯುತ್ತಾರೆ” ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.
ದಹಾನಿ ಇದುವರೆಗೆ ಪಾಕ್ ಪರ ಎರಡು ಏಕದಿನ ಪಂದ್ಯಗಳನ್ನಾಡಿದ್ದು, 11 ಟಿ20 ಪಂದ್ಯಗಳ ಅನುಭವ ಹೊಂದಿದ್ದಾರೆ. ಮತ್ತೊಂದೆಡೆ 22 ವರ್ಷದ ಜಮಾರ್ ಆರು ಟಿ20 ಪಂದ್ಯಗಳನ್ನು ಆಡಿದ್ದು, ಏಕದಿನ ಪದಾರ್ಪಣೆಯಾಗಿಲ್ಲ.