ಕೊಲಂಬೊ: ಸದ್ಯ ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2023 ಕೂಟದ ಸೂಪರ್ ಫೋರ್ ನ ಮೊದಲ ಪಂದ್ಯವನ್ನು ಭಾರತವು ರವಿವಾರ ಆಡಲಿದೆ. ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.
ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಇದೀಗ ತಂಡ ಸೇರಿಕೊಂಡಿದ್ದಾರೆ. ಫಿಟ್ನೆಸ್ ಸಮಸ್ಯೆಯ ಕಾರಣದಿಂದ ಬೆಂಗಳೂರಿನ ಎನ್ ಸಿಎನಲ್ಲಿದ್ದ ರಾಹುಲ್ ಕೆಲ ದಿನಗಳ ಹಿಂದೆ ತಂಡ ಸೇರಿಕೊಂಡಿದ್ದು, ಅಭ್ಯಾಸದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ:‘Jawan’ box office collection: ರಿಲೀಸ್ ಆದ ಎರಡೇ ದಿನಕ್ಕೆ 200 ಕೋಟಿ ಗಳಿಸಿದ ʼಜವಾನ್ʼ
ಕೆಎಲ್ ರಾಹುಲ್ ಅವರು ತಂಡಕ್ಕೆ ಸೇರ್ಪಡೆಯಾದ ಕಾರಣ ಬ್ಯಾಕಪ್ ವಿಕೆಟ್ ಕೀಪರ್ ಆಗಿದ್ದ ಸಂಜು ಸ್ಯಾಮ್ಸನ್ ಅವರನ್ನು ಹಿಂದಕ್ಕೆ ಕರೆಸಲಾಗಿದೆ. ರಿಸರ್ವ್ ಆಟಗಾರನಾಗಿ ಲಂಕಾಗೆ ಹಾರಿದ್ದ ಸ್ಯಾಮ್ಸನ್ ಅವರು ಇದೀಗ ಭಾರತಕ್ಕೆ ಮರಳಿದ್ದಾರೆ.
“ಕೆಎಲ್ ತಂಡಕ್ಕೆ ಸೇರ್ಪಡೆಗೊಂಡ ನಂತರ ಸಂಜು ಸ್ಯಾಮ್ಸನ್ ಅವರನ್ನು ವಾಪಸ್ ಕಳುಹಿಸಲಾಗಿದೆ. ಸ್ಯಾಮ್ಸನ್ ತಂಡದೊಂದಿಗೆ ಸ್ಟ್ಯಾಂಡ್-ಬೈ ಆಟಗಾರನಾಗಿ ಪ್ರಯಾಣಿಸುತ್ತಿದ್ದ ಕಾರಣ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ” ಎಂದು ಬಿಸಿಸಿಐ ಮೂಲಗಳು ಎಎನ್ ಐಗೆ ತಿಳಿಸಿವೆ.
ಕೂಟದ ಮೊದಲೆರಡು ಪಂದ್ಯಗಳಿಂದ ತಪ್ಪಿಸಿಕೊಂಡಿದ್ದ ರಾಹುಲ್ ಪಾಕಿಸ್ತಾನ ವಿರುದ್ಧದ ಸೂಪರ್ ಫೋರ್ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ಗುರುವಾರ, ಭಾರತವು ತೀವ್ರವಾದ ಅಭ್ಯಾಸ ನಡೆಸಿದೆ. ಪಾಕಿಸ್ತಾನ ತಂಡದ ಗುಣಮಟ್ಟದ ಬೌಲಿಂಗ್ ದಾಳಿಯನ್ನು ಗಮನದಲ್ಲಿಟ್ಟುಕೊಂಡು ಕೆಎಲ್ ರಾಹುಲ್ ಎಡಗೈ ವೇಗಿಗಳು ಮತ್ತು ಬಲಗೈ ವೇಗಿಗಳ ಎದುರು ಬ್ಯಾಟಿಂಗ್ ಅಭ್ಯಾಸ ಮಾಡಿದರು. ಅಲ್ಲದೆ ಶುಕ್ರವಾರ ವಿಕೆಟ್ ಕೀಪಿಂಗ್ ಅಭ್ಯಾಸ ಕೂಡಾ ಮಾಡಿದ್ದಾರೆ.