Advertisement

Asia Cup ಕ್ರಿಕೆಟ್‌ ವೇಳಾಪಟ್ಟಿ ಅಂತಿಮ: ಶ್ರೀಲಂಕಾದಲ್ಲಿ ಭಾರತ-ಪಾಕಿಸ್ತಾನ ಪಂದ್ಯ

10:38 PM Jul 12, 2023 | Team Udayavani |

ನವದೆಹಲಿ: ಬಹು ನಿರೀಕ್ಷಿತ ಏಷ್ಯಾ ಕಪ್‌ ಪಂದ್ಯಾವಳಿಯ ವೇಳಾಪಟ್ಟಿಯನ್ನು ಕೊನೆಗೂ ಅಂತಿಮಗೊಳಿಸಲಾಗಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ಆ. 31ರಿಂದ ಸೆ.17ರ ವರೆಗೆ ಇದು “ಹೈಬ್ರಿಡ್‌’ ಮಾದರಿಯಲ್ಲಿ ನಡೆಯಲಿದೆ. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ತೆರಳದ ಕಾರಣ ಇತ್ತಂಡಗಳ ನಡುವಿನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಾಗುವುದು. 2010ರ ಪಂದ್ಯಾವಳಿಯಂತೆ ಈ ಪಂದ್ಯಗಳು ಡಂಬುಲದಲ್ಲಿ ನಡೆಯುವ ಸಾಧ್ಯತೆ ಇದೆ.

Advertisement

ಏಷ್ಯಾ ಕಪ್‌ ವೇಳಾಪಟ್ಟಿ ಅಂತಿಮಗೊಂಡಿರುವುದನ್ನು ಐಪಿಎಲ್‌ ಚೇರ್ಮನ್‌ ಅರುಣ್‌ ಧುಮಾಲ್‌ ಬುಧವಾರ ತಿಳಿಸಿದರು. ಸದ್ಯ ಅವರು ಐಸಿಸಿ ಮುಖ್ಯ ಕಾರ್ಯನಿರ್ವಾಹಕರ ಸಭೆಯಲ್ಲಿ (ಸಿಎಸಿ) ಪಾಲ್ಗೊಳ್ಳಲು ಡರ್ಬನ್‌ಗೆ ಆಗಮಿಸಿದ್ದಾರೆ. ವೇಳಾಪಟ್ಟಿಯನ್ನು ಅಂತಿಮ ಸಮ್ಮತಿಗಾಗಿ ಕ್ರಿಕೆಟ್‌ ಮಂಡಳಿಗಳಿಗೆ ಕಳುಹಿಸಲಾಗಿದೆ, ಶೀಘ್ರದಲ್ಲೇ ಇದನ್ನು ಪ್ರಕಟಿಸಲಾಗುವುದು ಎಂದು ಧುಮಾಲ್‌ ಹೇಳಿದರು.

ಪಾಕ್‌ನಲ್ಲಿ ನಾಲ್ಕೇ ಪಂದ್ಯ
ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಮತ್ತು ಪಿಸಿಬಿ ಮುಖ್ಯಸ್ಥ ಝಕಾ ಅಶ್ರಫ್ ಭೇಟಿಯಾಗಿ ಏಷ್ಯಾಕಪ್‌ ವೇಳಾಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಇದರ ಒಪ್ಪಿಗೆ ಪಡೆಯುವ ಪ್ರಕ್ರಿಯೆ ಬಾಕಿ ಇದೆ. ಇದರಂತೆ ಪಾಕಿಸ್ತಾನದಲ್ಲಿ 4 ಲೀಗ್‌ ಪಂದ್ಯಗಳು, ಶ್ರೀಲಂಕಾದಲ್ಲಿ ಫೈನಲ್‌ ಸೇರಿದಂತೆ 9 ಪಂದ್ಯಗಳು ನಡೆಯಲಿವೆ ಎಂಬುದಾಗಿ ಧುಮಾಲ್‌ ವಿವರ ಒದಗಿಸಿದರು. ಇದರಂತೆ ಪಾಕಿಸ್ತಾನ ತನ್ನ ತವರಿನ ಏಕೈಕ ಪಂದ್ಯವನ್ನು ನೇಪಾಲ ವಿರುದ್ಧ ಆಡಲಿದೆ. ಪಾಕ್‌ನಲ್ಲಿ ನಡೆಯಲಿರುವ ಇತರ 3 ಪಂದ್ಯಗಳೆಂದರೆ ಅಫ್ಘಾನ್‌-ಬಾಂಗ್ಲಾ, ಬಾಂಗ್ಲಾ-ಲಂಕಾ ಮತ್ತು ಲಂಕಾ-ಅಫ್ಘಾನ್‌.

ಭಾರತ-ಪಾಕ್‌ 3 ಪಂದ್ಯ?!
ಇದು 2 ಸುತ್ತುಗಳ ಪಂದ್ಯಾವಳಿ. ಅದರಂತೆ ಭಾರತ-ಪಾಕಿಸ್ತಾನ 2 ಸಲ ಎದುರಾಗಲಿವೆ. ಫೈನಲ್‌ ತಲುಪಿದರೆ 3ನೇ ಮುಖಾಮುಖೀ ನಡೆಯಲಿದೆ. ಈ ಎಲ್ಲ ಪಂದ್ಯಗಳು ಶ್ರೀಲಂಕಾದಲ್ಲೇ ಸಾಗಲಿವೆ. ಇದರಿಂದ ಕುಸಿದಿರುವ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ ಆರ್ಥಿಕ ಸ್ಥಿತಿ ಪ್ರಗತಿ ಕಂಡೀತು ಎಂಬುದು ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ನ ಆಶಾವಾದ.

ಇದೇ ವೇಳೆ, ಭಾರತ ತಂಡ ಪಾಕಿಸ್ತಾನಕ್ಕೆ ಪಯಣಿಸಲಿದೆ ಎಂಬ ಪಾಕ್‌ ಕ್ರೀಡಾ ಸಚಿವ ಎಹ್ಸಾನ್‌ ಮಜಾರಿ ಅವರ ಹೇಳಿಕೆ ಹಾಗೂ ಅಲ್ಲಿನ ಕೆಲವು ಪತ್ರಿಕೆಗಳ ವರದಿಗಳನ್ನು ಧುಮಾಲ್‌ ತಳ್ಳಿಹಾಕಿದರು.

Advertisement

ವಿಶ್ವಕಪ್‌ ಆಡಲು ಪಾಕ್‌ ಭಾರತಕ್ಕೆ ಬರುವುದೇ?
ಹಾಗಾದರೆ ವರ್ಷಾಂತ್ಯದ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡಲು ಪಾಕಿಸ್ತಾನ ತಂಡ ಭಾರತಕ್ಕೆ ಬರುವುದೇ? ಇದು ಅನೇಕರ ಪ್ರಶ್ನೆ. ಬರಲಿದೆ ಮತ್ತು ಬರಲೇಬೇಕು. ಏಕೆಂದರೆ, ಐಸಿಸಿಯ ಮೆಂಬರ್ ಪಾರ್ಟಿಸಿಪೇಶನ್‌ ಅಗ್ರಿಮೆಂಟ್‌’ಗೆ (ಎಂಪಿಎ) ಪಾಕಿಸ್ಥಾನ 2015ರಲ್ಲೇ ಸಹಿ ಹಾಕಿದೆ. ಇದು 8 ವರ್ಷಗಳ ಕಾಲಾವಧಿಯ ಒಪ್ಪಂದ; 2023ರ ಕೊನೆಗೆ ಮುಕ್ತಾಯಗೊಳ್ಳುತ್ತದೆ.

ಒಮ್ಮೆ ಎಂಪಿಎಗೆ ಸಹಿ ಹಾಕಿದರೆ ಆ ತಂಡ ಐಸಿಸಿಯ ಯಾವುದೇ ಕೂಟದಿಂದ ಹೊರಗುಳಿಯುವಂತಿಲ್ಲ. ಎಲ್ಲೇ ನಡೆದರೂ ಹೋಗಿ ಆಡಲೇಬೇಕು. ಇಲ್ಲಿ ಭದ್ರತಾ ವೈಫ‌ಲ್ಯವನ್ನೂ ನೆಪ ಮಾಡುವಂತಿಲ್ಲ’ ಎಂಬುದಾಗಿ ಐಸಿಸಿ ನಿಯಮಾವಳಿ ತಿಳಿಸುತ್ತದೆ. ಆದರೆ 2025ರಲ್ಲಿ ಪಾಕಿಸ್ಥಾನ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಗೆ ಎಂಪಿಎ ನಿಯಮವನ್ನು ಅಳವಡಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next