ಪಲ್ಲೆಕೆಲೆ (ಶ್ರೀಲಂಕಾ): ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಶನಿವಾರ ನಡೆದ “ಎ’ ವಿಭಾಗದ ಲೀಗ್ ಹಂತದ ಭಾರತ ಮತ್ತು ಪಾಕಿಸ್ಥಾನ ನಡುವಿನ ಜಿದ್ದಾಜಿದ್ದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಎರಡೂ ತಂಡಗಳು ತಲಾ ಒಂದು ಅಂಕವನ್ನು ಪಡೆದಿವೆ. ಪಾಕಿಸ್ಥಾನವು ಸೂಪರ್ ಫೋರ್‌ಗೆ ತಲುಪಿದೆ.
ಹೈ ವೋಲ್ಟೇಜ್ ಪಂದ್ಯಕ್ಕೆ ಆರಂಭದಲ್ಲಿ ಮಳೆಯಿಂದ ಅಡಚಣೆ ಯಾಯಿತು. ಆ ಬಳಿಕ ಭಾರತ ತಂಡ ಆರಂಭಿಕ ಆಘಾತಕ್ಕೆ ಸಿಲುಕಿದರೂ 48.5 ಓವರ್ ಗಳಲ್ಲಿ 266 ರನ್ ಗಳಿಗೆ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಇಶಾನ್ ಕಿಶನ್ , ಹಾರ್ದಿಕ್ ಪಾಂಡ್ಯ ಸಮಯೋಚಿತ ಆಟದ ನೆರವಿನಿಂದ ಬದ್ಧ ಎದುರಾಳಿ ಪಾಕಿಸ್ಥಾನಕ್ಕೆ ಗೆಲ್ಲಲು 267 ರನ್ ಗಳ ಸವಾಲನ್ನು ಮುಂದಿಟ್ಟಿತ್ತು. ರಾತ್ರಿ 10 ಗಂಟೆಯಾದರೂ ಮಳೆ ನಿಲ್ಲದ ಕಾರಣ ಪಂದ್ಯವನ್ನು ರದ್ದು ಮಾಡಲಾಯಿತು.
ಭಾರತ ತಂಡ 15 ರನ್ ಆಗಿದ್ದ ವೇಳೆ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಶರ್ಮಾ 11ರನ್ (22 ಎಸೆತ) ಗಳಿಸಿ ಶಾಹೀನ್ ಅಫ್ರಿದಿ ಅವರ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರೂ. ಆ ಬಳಿಕ ಭರವಸೆಯ ವಿರಾಟ್ ಕೊಹ್ಲಿ ಅವರು ತಂಡ 27 ರನ್ ಗಳಿಸಿದ್ದ ವೇಳೆ ಔಟಾದರು. 4 ರನ್ ಗಳಿಗೆ ನಿರ್ಗಮಿಸಿ ಭಾರಿ ನಿರಾಶರಾದರು. ಆರಂಭಿಕರಾಗಿ ಬಂದ ಶುಭಮನ್ ಗಿಲ್ 32 ಎಸೆತಗಳಲ್ಲಿ 10 ರನ್ ಗಳಿಸಿದರು.ಶ್ರೇಯಸ್ ಅಯ್ಯರ್ 14 ರನ್ ಗಳಿಗೆ ಔಟಾದರು.
ಆ ಬಳಿಕ ತಂಡಕ್ಕೆ ಆಧಾರವಾದ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಭರ್ಜರಿ ಜತೆಯಾಟವಾಡಿದರು. ತಂಡ ಗೌರವಯುತ ಮೊತ್ತ ಕಲೆಹಾಕಲು ಕಾರಣರಾದರು. ಇಶಾನ್ ಕಿಶನ್ 82(81ಎಸೆತ) ರನ್ ಗಳಿಸಿದ್ದ ವೇಳೆ ಹ್ಯಾರಿಸ್ ರೌಫ್ ಎಸೆದ ಚೆಂಡನ್ನು ಬಾಬರ್ ಅಜಮ್ ಅವರ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. ಶತಕದ ಕನಸು ಕಂಡಿದ್ದ ಅಭಿಮಾನಿಗಳು ಭಾರಿ ನಿರ್ಶರಾಗಬೇಕಾಯಿತು. ಪಾಂಡ್ಯ ತಾಳ್ಮೆಯ ಅಮೋಘ ಆಟವಾಡಿದರು. 87ರನ್ (90ಎಸೆತ) ಶಾಹೀನ್ ಅಫ್ರಿದಿ ಎಸೆದ ಚೆಂಡನ್ನು ಅಘಾ ಸಲ್ಮಾನ್ ಕೈಗಿತ್ತು ನಿರ್ಗಮಿಸಿದರು. ಮೊದಲ ಅಂತಾರಾಷ್ಟ್ರೀಯ ಏಕದಿನ ಶತಕ ಸಿಡಿಸುವ ಅವರ ಕನಸು ನುಚ್ಚುನೂರಾಯಿತು.
ರವೀಂದ್ರ ಜಡೇಜಾ 14, ಕೊನೆಯಲ್ಲಿ ಬಂದ ಜಸ್ಪ್ರೀತ್ ಬುಮ್ರಾ16 ರನ್ ಗಳಿಸಿದರು. ಪಾಕ್ ಪರ ಬಿಗಿ ದಾಳಿ ನಡೆಸಿದ ಶಾಹೀನ್ ಅಫ್ರಿದಿ 4 ವಿಕೆಟ್ ಪಡೆದು ಭಾರತದ ಬ್ಯಾಟ್ಸ್ ಮ್ಯಾನ್ ಗಳನ್ನು ಕಾಡಿದರು. ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ತಲಾ 3 ವಿಕೆಟ್ ಪಡೆದರು.