ಮುಂಬೈ: ಕಳೆದ ಬಾರಿ ಕೋವಿಡ್ ಕಾರಣದಿಂದ ರದ್ದಾಗಿದ್ದ ಎಷ್ಯಾಕಪ್ ಕ್ರಿಕೆಟ್ ಕೂಟ ಈ ಬಾರಿ ನಡೆಯಲಿದೆ. ಈ ಬಾರಿಯ ಎಷ್ಯಾ ಕಪ್ ಕೂಟವು ಟಿ20 ಮಾದರಿಯಲ್ಲಿ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತಿಳಿಸಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಇಂದು ಸಭೆ ಸೇರಿದ್ದು, ಈ ಬಗ್ಗೆ ನಿರ್ಧರಿಸಿದೆ. ಈ ಬಾರಿಯ ಏಷ್ಯಾ ಕಪ್ ಕೂಟವು ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ಶ್ರೀಲಂಕಾದಲ್ಲಿ ನಡೆಯಲಿದೆ. ಕೂಟದ ಅರ್ಹತಾ ಸುತ್ತಿನ ಪಂದ್ಯಗಳು ಆಗಸ್ಟ್ 20ರಿಂದ ನಡೆಯಲಿದೆ.
ಏಷ್ಯಾ ಕಪ್ ಕೂಟವು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಆದರೆ 2020 ರ ಆವೃತ್ತಿಯ ಪಂದ್ಯಾವಳಿಯನ್ನು ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ರದ್ದುಗೊಳಿಸಲಾಗಿತ್ತು.
1984 ರಲ್ಲಿ ಟೂರ್ನಮೆಂಟ್ ಪ್ರಾರಂಭವಾದಾಗಿನಿಂದ, ಭಾರತವು ಏಷ್ಯಾ ಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. ಕಳೆದ ಎರಡು ಆವೃತ್ತಿಗಳು ಸೇರಿದಂತೆ ಇದುವರೆಗೆ 14 ಆವೃತ್ತಿಗಳಲ್ಲಿ ಏಳು ಬಾರಿ ಭಾರತ ಚಾಂಪಿಯನ್ ಆಗಿದೆ. (1984, 1988, 1990/91, 1995, 2010, 2016 ಮತ್ತು 2018)
ಇದನ್ನೂ ಓದಿ:ವನಿತಾ ವಿಶ್ವಕಪ್ 2022ರ ಅತೀ ದೊಡ್ಡ ಸಿಕ್ಸರ್ ಬಾರಿಸಿದ ಪೂಜಾ ವಸ್ತ್ರಾಕರ್; ವಿಡಿಯೋ ನೋಡಿ
ಕಳೆದ ಆವೃತ್ತಿಯ ಟೂರ್ನಿಯಲ್ಲಿ ರೋಹಿತ್-ಶರ್ಮಾ ನೇತೃತ್ವದ ಟೀಂ ಇಂಡಿಯಾ ದುಬೈನಲ್ಲಿ ನಡೆದ ಫೈನಲ್ ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿತ್ತು.
ಈ ಬಾರಿ ಎರಡನೇ ಬಾರಿ ಏಷ್ಯಾ ಕಪ್ ಕೂಟವನ್ನು ಟಿ20 ಮಾದರಿಯಲ್ಲಿ ಆಡಲಾಗುತ್ತಿದೆ. 2016ರ ಕೂಟವನ್ನು ಟಿ20 ಮಾದರಿಯಲ್ಲಿ ಆಡಿದ್ದು, ಭಾರತ ಜಯಿಸಿತ್ತು.